ಹುಬ್ಬಳ್ಳಿ: ಆಕಾಶದೆತ್ತರಕ್ಕೆ ಬಾಲಂಗೋಚಿ ಹಾರಿಸುವುದೆಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಮಕ್ಕಳಿಗೆ ಗಾಳಿಪಟದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ದೊಡ್ಡ ನಗರಗಳಲ್ಲಿ, ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಗಾಳಿಪಟ ಉತ್ಸವ ಆಯೋಜಿಸಿ ಮಕ್ಕಳನ್ನು ರಂಜಿಸುತ್ತಾರೆ.
ಎಲ್ಲರ ಕೈಯಲ್ಲೂ ಒಂದೊಂದು ಪಟ. ಲೇ ನನ್ನ ಗಾಳಿಪಟ ನಿನ್ನ ಪಟಕ್ಕಿಂತ ದೊಡ್ಡದು ನೋಡೋ. ನಿನ್ನ ಪಟದ ಬಣ್ಣ ಚೆನ್ನಾಗಿಲ್ಲ. ಎಲ್ಲರಿಗಿಂತ ನನ್ನ ಪಟವೇ ಚೆನ್ನಾಗಿದೆ. ನನ್ನ ಪಟ ನೋಡೋ ಎಷ್ಟು ಎತ್ತರಕ್ಕೆ ಹಾರಿದೆ. ಅಯ್ಯೋ ನನ್ನ ಗಾಳಿಪಟ ತೆಂಗಿನ ಮರಕ್ಕೆ ಸಿಕ್ಕಿ ಹಾಕಿಕೊಳ್ತು. ಹೌದಾ ನನ್ನ ಪಟವೂ ಕರೆಂಟ್ ತಂತಿಗೆ ಸಿಕ್ಕಿಕೊಳ್ತು. ಲೇ ನನ್ನ ಪಟ ನಿನ್ನ ಪಟದ ದಾರಕ್ಕೆ ಸಿಕ್ಕಿಕೊಳ್ತು. ಅಪ್ಪ ನನ್ನ ಪಟ ಯಾಕೋ ಹಾರ್ತಾನೇ ಇಲ್ಲ, ಸರಿಮಾಡಿಕೊಡಿ. ಅಯ್ಯೋ ನನ್ನ ಪಟದ ದಾರವೇ ಕಿತ್ತು ಹೋಯ್ತು ಅಮ್ಮ. ಈ ಎಲ್ಲ ಮಾತುಗಳು ಕೇಳಿ ಬಂದಿದ್ದು ನಗರದ ಜೆ.ಕೆ. ಸ್ಕೂಲ್ ಮಾರ್ಗದ ವೆಂಕಟರಮಣ ದೇವಸ್ಥಾನದ ಮುಂಭಾಗದ ಜಮೀನಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ.
ನಗರದ ವಿವಿಧ ಬಡಾವಣೆಗಳ ಮಕ್ಕಳು ವಿಭಿನ್ನ ವಿನ್ಯಾಸದ ಗಾಳಿಪಟ ತಂದಿದ್ದರು. ಸ್ಥಳದಲ್ಲಿಯೇ ಗಾಳಿಪಟಗಳನ್ನು ಖರೀದಿಸಿ ಬಾನಂಗಳಕ್ಕೆ ಹಾರಿಸಿದವರೆ ಹೆಚ್ಚು. ಕೆಲವು ವಿದ್ಯಾರ್ಥಿಗಳು ತಮಗೆ ಇಷ್ಟವಾದ ಚಿತ್ರಗಳನ್ನು ಪಟದ ಮೇಲೆ ಅಂಟಿಸಿದ್ದರು.
ಸೂತ್ರದ ಹಿಡಿತದಿಂದ ಬಾನಂಗದಲ್ಲಿ ತೇಲಾಡುತ್ತ, ಒದ್ದಾಡುತ್ತ, ನಸು ನಗುತ್ತ, ಮನಸ್ಸಿಗೆ ಮುದ ನೀಡುತ್ತ ಬಾನು-ಭುವಿಗಳನ್ನು ಅಪ್ಪಿಕೊಳ್ಳಲು ಹಾತೊರೆಯುವ ಗಾಳಿಪಟಗಳ ಚಲ್ಲಾಟವೇ ಅದ್ಭುತವಾಗಿತ್ತು. ಕಣ್ಣೆತ್ತಿ ನೋಡುವುದಕ್ಕಿಂತ ಕತ್ತು ಎತ್ತರಿಸಿ ಬಾನಂಗಳದಲ್ಲಿ ಕಣ್ಣು ಪಿಳುಕಿಸುತ್ತ, ಅತ್ತಿಂದಿತ್ತ ಕಣ್ಣೋಟ ಹಾಯಿಸುತ್ತ ಆಕಾಶದಗಲ ಸೂರ್ಯನೆದುರಿಸಿ ಗಾಳಿಪಟಗಳನ್ನು ನೋಡುವ ಅನುಭವಗಳನ್ನು ಮಕ್ಕಳು ಪಡೆದರು.
ಪಟ ಹಾರಿಸಲು ಪಾಲಕರು ಮಕ್ಕಳಿಗೆ ನೆರವಾಗುತ್ತ ಮಕ್ಕಳಿಗೆ ಗಾಳಿಪಟ ಹಾರಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಕೆಲವು ಪೋಷಕರೂ ಮಕ್ಕಳೊಂದಿಗೆ ಪಟ ಹಾರಿಸಿ ಸಂಭ್ರಮಿಸಿದರು. ಬಾನೆತ್ತರಕ್ಕೆ ಹಾರಿದ ಪಟ ನೋಡಿ ಮಕ್ಕಳು ಕುಣಿದು ಕುಪ್ಪಳಿಸಿದರು.