ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರೆನ್ನಲಾದ ಬಾದಾಮಿ ಮತಕ್ಷೇತ್ರದ ಡಜನ್‌ಗೂ ಅಧಿಕ ಅಹಿಂದ ನಾಯಕರು ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖರು ಇದೀಗ ಕಾಂಗ್ರೆಸ್‌ಗೆ ಗುಡ್ ಬೈ ಹೇಳುವ ಮೂಲಕ ಕೇಜ್ರೀವಾಲ್ ಪಕ್ಷದತ್ತ ವಾಲಿದರು.
ಪ್ರಸ್‌ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಆಮ್ ಆದ್ಮಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಾಗಲಕೋಟೆ ಭಾಗದ ಅದರಲ್ಲೂ ಕುರುಬ ಸಮುದಾಯದ ಹತ್ತು ಹಲವು ಪ್ರಮುಖರು ಆಮ್ ಆದ್ಮಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು. ಆಪ್ ಮುಖಂಡರಾದ ಪೃಥ್ವಿರೆಡ್ಡಿ, ಭಾಸ್ಕರ್‌ರಾವ್, ಮುಖ್ಯಮಂತ್ರಿ ಚಂದ್ರು ಅವರು ಪಕ್ಷದ ಶಾಲು ಹಾಕಿ ಧ್ವಜ ನೀಡಿ ಈ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಮಂತ್ರಿ ಚಂದ್ರು, ಬಿಜೆಪಿ ಸರ್ಕಾರ ಬರೀ ಬೊಗಳೆ ಸರ್ಕಾರವಾಗಿದ್ದು, ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತಿದೆ ಎಂದು ಜರಿದರೆ, ಆಪ್ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು, ಇಲ್ಲಿಯವರೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಅವಕಾಶ ಕೊಟ್ಟು ಅವರ ಕಾರ್ಯವೈಖರಿಯನ್ನು ನೋಡಲಾಗಿದೆ. ಭ್ರಷ್ಟಾಚಾರದಿಂದ ಈ ಮೂರೂ ಪಕ್ಷಗಳೂ ಹೊರತಾಗಿಲ್ಲ. ಆದುದರಿಂದ ದೆಹಲಿಯಲ್ಲಿ ಉತ್ತಮ ಮತ್ತು ಮಾದರಿ ಆಡಳಿತ ನೀಡುತ್ತಿರುವ ಅರವಿಂದ ಕೇಜ್ರೀವಾಲ್ ಅವರ ನೇತೃತ್ವದ ಆಮ್ ಆದ್ಮಿಯನ್ನು ಕರ್ನಾಟಕದಲ್ಲಿ ಬೆಂಬಲಿಸಬೇಕು ಎಂದರು.
ಆಮ್ ಆದ್ಮಿಗೆ ಸೇರ್ಪಡೆಗೊಂಡವರಲ್ಲಿ ಉತ್ತರ ಕರ್ನಾಟಕ ಭಾಗದ ಮುಖಂಡರೆನ್ನಿಸಿದ ಶಿವರಾಯಪ್ಪ ಜೋಗಿನ್, ಮುತ್ತಪ್ಪ ಕೋಮರ್,ಅನಿಲ್‌ಕುಮಾರ್ ಬೇಗಾರ್, ಸಂಜೀವ್‌ಕುಮಾರ್ ಕುಲ್ಕರ್ಣಿ, ಸಾ.ಸಿ.ಬೆನಕನಹಳ್ಳಿ, ಡಾ.ಗೀತಾ ಮಹಾಂತೇಶ್ ಯಾಡಗಿ, ಶ್ರೀನಿವಾಸ್‌ಗೌಡ, ಬಸವರಾಜ ರಾಮನಹಳ್ಳಿ, ಹುಲಗಪ್ಪ ಚೂರಿ, ಸೋಮಣ್ಣ ಮಲ್ಲೂರು, ರಾಮಣ್ಣ ಹೂವಣ್ಣವರ್ ಪ್ರಮುಖರು.