ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕನಕದಾಸರ ಜನ್ಮಸ್ಥಳ ಬಾಡ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ನೇತೃತ್ವದಲ್ಲಿ ಜರುಗಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಂಜೆ ಪ್ರದರ್ಶನಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.
ಮೂಡಬಿದ್ರೆಯ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು. ಭರತನಾಟ್ಯ, ಉತ್ತರ ಭಾರತದ ಪ್ರಸಿದ್ಧ ಕಥಕ್ ನೃತ್ಯ, ಯಕ್ಷಗಾನ, ಮಲ್ಲಕಂಬ ಪ್ರದರ್ಶನ, ಲಂಬಾಣಿ ನೃತ್ಯ, ಜಾನಪದ ನೃತ್ಯ, ಸ್ಕಿಕ್ ಡ್ಯಾನ್ಸ್, ದಾಂಡಿಯಾ ನೃತ್ಯ ಸೇರಿದಂತೆ ವಿವಿಧ ಪ್ರಕಾರದ ಕಲಾತಂಡಗಳು ನೀಡಿದ ಪ್ರದರ್ಶನ ಗಮನ ಸೆಳೆದವು.
ಮಿರ್ಚಿ, ಮಂಡಕ್ಕಿ ಸವಿದ ಬೊಮ್ಮಾಯಿ, ಆರ್. ಅಶೋಕ
ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ ಅವರು ಗಿರ್ಮಿಟ್ ಮಂಡಕ್ಕಿ, ಮಿರ್ಚಿ ಸವಿಯುತ್ತಾ ವೀಕ್ಷಿಸಿದರು.
ಮಲ್ಲಕಂಬ ಪ್ರದರ್ಶನ ನೋಡಿದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರು ಎದ್ದು ನಿಂತು ಚಪ್ಪಾಳೆ ತಟ್ಟಿ ಮಲ್ಲಕಂಬ ಪಟುಗಳನ್ನು ಹುರಿದುಂಬಿಸಿದರು.