ಬಸ್‌ ಡಿಕ್ಕಿ: ಕುದುರೆ ಸಾವು, ಸವಾರ ಪ್ರಾಣಾಪಾಯದಿಂದ ಪಾರು

Advertisement

ಮಂಗಳೂರು: ಕುದುರೆಯೊಂದಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕುದುರೆ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪೆದಮಲೆ ಎಂಬಲ್ಲಿ ಇಂದು ನಡೆದಿದ್ದು, ಕುದುರೆ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಉದ್ಯಮಿ ಪಿಲಿಗೂಡು ಮೋನು ಎಂಬವರಿಗೆ ಸೇರಿದ ಕುದುರೆ ಇದಾಗಿದ್ದು, ಇವರ ಪುತ್ರ ಬೆಳಗ್ಗಿನ ಹೊತ್ತು ಕುದುರೆಯಲ್ಲಿ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ರೈಡಿಂಗ್ ಹೊರಟಿದ್ದರು. ಈ ವೇಳೆ ಈತನ ಪರಿಚಯದ ಅಡಿಕೆ ವರ್ತಕ ಸಚಿನ್ ಎಂಬಾತ ತಾನೊಮ್ಮೆ ಕುದುರೆ ಸವಾರಿ ಮಾಡುತ್ತೇನೆಂದು ಕೇಳಿದ್ದಾರೆ. ಅದರಂತೆ ಸಚಿನ್ ಕುದುರೆ ಸವಾರಿ ಹೊರಟಿದ್ದರು. ಕುದುರೆ ಓಡುತ್ತಿದ್ದ ಸಂದರ್ಭ ಪೆದಮಲೆ ಬಳಿಯ ತಿರುವಿನಲ್ಲಿ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು, ಸಚಿನ್ ಕುದುರೆಯ ಮೇಲಿನಿಂದ ಎಸೆಯಲ್ಪಟ್ಟಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಡಿಕ್ಕಿಯಿಂದ ತಲೆಗೆ ಗಂಭೀರ ಗಾಯಗೊಂಡ ಕುದುರೆ ಕುಸಿದು ಹೊರಳಾಡಿ ಪ್ರಾಣ ಬಿಟ್ಟಿದೆ.
ಕುದುರೆ ಬಿದ್ದ ಸಂದರ್ಭ ಕುದುರೆಯನ್ನು ಮಡಿಲಲ್ಲಿ ಮಲಗಿಸಿ ಆರೈಕೆ ಮಾಡುತ್ತಿದ್ದ ಕುದುರೆಯ ಯಜಮಾನನ ಪುತ್ರನ ಅಳು ಸ್ಥಳದಲ್ಲಿದ್ದವರ ಕಣ್ಣಲ್ಲೂ ನೀರು ಬರಿಸಿತು.
ಸಚಿನ್ ಬಳಿ ಕೂಡಾ ಕುದುರೆಯೊಂದಿದ್ದು, ಅವರು ಕೂಡಾ ಕುದುರೆ ಸವಾರಿಯ ಹವ್ಯಾಸವುಳ್ಳವರಾಗಿದ್ದಾರೆ. ಮೂಳೆ ಮುರಿತಕ್ಕೊಳಗಾಗಿರುವ ಸಚಿನ್ ಅವರನ್ನು ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.