ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ಸುಮಾರು 500 ಎಕರೆಗಿಂತಲೂ ಹೆಚ್ಚಿಗೆ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿದೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಸಮೀಕ್ಷೆ ನಡೆಸಿ ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೊನವಾಡ ಒತಾಯಿಸಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಶುಕ್ರವಾರ ರೈತರೊಂದಿಗೆ ಬೆಳೆ ಹಾನಿ ಪರಿವೀಕ್ಷಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು ಅತಿವೃಷ್ಟಿಯಿಂದ ರೈತರ ಬೆಳೆಗಳು ಹಾಳಾಗುತ್ತಿವೆ. ಬಬಲೇಶ್ವರ ಕ್ಷೇತ್ರದ ಕಾಖಂಡಕಿ, ದಾನ್ಯಳ, ಕೋಟ್ಯಾಳ, ದಾಶ್ಯಾಳ, ಹರನಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಟಾವಿಗೆ ಬಂದಿದ್ದ ಮೆಕ್ಕೆಜೋಳ, ತೊಗರಿ, ಬಾಳೆ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿದ್ದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಸರ್ಕಾರ ಜನರ ಪರವಾಗಿದೆ ಎಂದು ಹೇಳಿದರೆ ಸಾಲದು, ಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ರೈತರು ಸಾಕಷ್ಟು ಖರ್ಚು ಮಾಡಿ ಗೊಬ್ಬರ, ಬೀಜ ಹಾಕಿ ಕಷ್ಟ ಪಟ್ಟು ಬೆಳೆದ ಬೆಳೆಗಳು ನೀರಲ್ಲಿ ನಿಂತು ಹಾಳಾಗುತ್ತಿವೆ. ರೈತರು ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸಿಲ್ಲ. ಈಗಲಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಕನಿಷ್ಠ ಎಕರೆಗೆ 25,000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.