ಬೆಳಗಾವಿ: ಟಿಕೆಟ್ ಕೈ ತಪ್ಪಿದ್ದರಿಂದ ಅಭ್ಯರ್ಥಿಗಳಿಗೆ ನಿರಾಸೆಯಾಗುವುದು ಸಹಜ. ಅವರ ಮನವೊಲಿಸುವ ಪ್ರಯತ್ನಗಳು ನಡೆದಿವೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾವು ಕೇಳಿದ ವ್ಯಕ್ತಿಗೆ ಟಿಕೆಟ್ ಸಿಗಬೇಕೆಂಬ ನಿರ್ಧಾರ ಇಲ್ಲ. ಆಕಾಂಕ್ಷಿಗಳ ಪಟ್ಟಿ ಬಹಳ ಇದೆ. ಆತ್ಮೀಯರಿಗೆ ಸಿಗಬೇಕೆಂಬುವ ನಿರ್ಧಾರ ನಮ್ಮ ಕೈಯಲಿಲ್ಲ. ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ಟಿಕೆಟ್ ನೀಡಿದ ಅಭ್ಯರ್ಥಿಯ ಗೆಲುವಿಗೆ ಸಹಕರಿಸಬೇಕೆಂದು ಸೂಚನೆ ನೀಡಲಾಗಿದೆ ಎಂದರು.
ಬೆಳಗಾವಿ ಜಿಲ್ಲಾದ್ಯಂತ ಬಂಡಾಯವೇನೂ ಇಲ್ಲ, ಕೆಲವೊಂದು ಕ್ಷೇತ್ರದಲ್ಲಿ ಇದೆ. ಎಲ್ಲವನ್ನು ಸರಿ ಮಾಡಲಾಗುವುದು. ಎರಡನೇಯ ಪಟ್ಟಿ ಬಿಡುಗಡೆ ಮಾಡಲಾಗಿದೆ. ಶೀಘ್ರವೇ ಮೂರನೇ ಪಟ್ಟಿ ಪ್ರಕಟ ಮಾಡಲಾಗುವುದು. ನಾಲ್ಕನೆಯ ಪಟ್ಟಿ ಆದರೂ ಆಗಬಹುದು. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಅಳೆದು ತೂಗಿ ಪ್ರಭಾವಿ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸುತ್ತಾರೆ ಎಂದ ಅವರು, ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಕೂಡಾ ನಮಗೆ ಸ್ಟಾರ್ ಎಂದವರು ಹೇಳುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದರು.