ಚಿಕ್ಕೋಡಿ: ರಾಜ್ಯದ ಜನತೆಯ ಕುತೂಹಲ ಕೆರಳಿಸಿದ್ದ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೆಗೂ ಫೈನಲ್ ಆಗಿದ್ದು, ಆಪರೇಶನ್ ಕಮಲದ ವೇಳೆ ಬಿಜೆಪಿ ಸೇರಿದ್ದ ಮಹೇಶ ಕುಮಟಳ್ಳಿಗೆ ಈ ಬಾರಿಯೂ ಬಿಜೆಪಿ ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದೆ. ಅಥಣಿ ಕ್ಷೇತ್ರ ಮರಳಿ ಪಡೆಯಲು ಕೊನೆಯ ಕ್ಷಣದವರೆಗೂ ತೀವ್ರ ಕಸರತ್ತು ನಡೆಸಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೆ ತೀವ್ರ ನಿರಾಸೆಯಾಗಿದ್ದು, ಅವರು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.
ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿ ಜಿಲ್ಲೆಯಲ್ಲಿ ಸುದ್ದಿ ಜೋರು ಸದ್ದು ಮಾಡುತ್ತಿದ್ದು, ಹೈಮಾಂಡ್ ನಿರ್ಧಾರಕ್ಕೆ ಸೆಡ್ಡೆ ಹೊಡೆಯುವ ಕುರಿತು ಸವದಿ ಪರೋಕ್ಷ ಸಳಿವು ನೀಡಿದ್ದಾರೆ. ಟಿಕೆಟ್ ಕೈತಪ್ಪಿರುವ ಬಗ್ಗೆ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಮುಂಗಾರು ಮಳೆ ಯಾವಾಗ ಬರುತ್ತೆ ಅನ್ನೋದು ಗೊತ್ತಾಗಲ್ಲ. ಜನತೆ ಮುಳುಗು ಅಂದ್ರೆ ಮುಳುಗುತ್ತೇನೆ. ತೇಲು ಅಂದ್ರೆ ತೇಲುತ್ತೇನೆ. ಮನೆಯಲ್ಲಿ ಇರು ಎಂದರೆ ಮನೆಯಲ್ಲಿ ಕೂರುವೆ. ಕ್ಷೇತ್ರದ ಜನತೆ ಜನತೆ ಏನು ನಿರ್ಧಾರ ಕೈಗೊಳ್ಳುವುರೋ ಅದಕ್ಕೆ ಬದ್ಧ. ಸಿಎಂ ನನ್ನ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಅವರ ಜೊತೆಗಿನ ಮಾತುಕತೆ ಬಳಿಕ ನನ್ನ ನಿರ್ಧಾರ ಪ್ರಕಟಿಸುವೆ ಎಂದು ಹೇಳಿಕೆ ನೀಡಿದ್ದಾರೆ.