ಕುಮಟಾ: ಶಾಸಕ ದಿನಕರ ಶೆಟ್ಟಿ ಫೇಸ್‌ಬುಕ್ ಖಾತೆಯ ಪೋಸ್ಟ್‌ಗಳಿಗೆ ಅವಹೇಳನಕಾರಿ ಕಾಮೆಂಟ್ ಮಾಡುತ್ತಿದ್ದ ಮಿರ್ಜಾನ ಮೂಲದ ವ್ಯಕ್ತಿಯ ವಿರುದ್ಧ ದಿನಕರ ಶೆಟ್ಟಿ ಅಭಿಮಾನಿ ಬಳಗದವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಿರ್ಜಾನ ಖೈರೆ ನಿವಾಸಿ ರವೀಂದ್ರ ಪಟಗಾರ ಎಂಬ ವ್ಯಕ್ತಿ ಶಾಸಕ ದಿನಕರ ಶೆಟ್ಟಿ ಫೇಸ್‌ಬುಕ್ ಖಾತೆಯಲ್ಲಿ ಹಾಕುವ ಫೋಸ್ಟ್‌ಗಳಿಗೆ ಅವಹೇಳನಕಾರಿಯಾಗಿ ಉತ್ತರಿಸಿ ಅಗೌರವ ಅಲ್ಲದೆ, ಚಾರಿತ್ರ್ಯಹರಣ ಮಾಡುವ ಉದ್ದೇಶದಿಂದ ತೇಜೋವಧೆ ಮಾಡುತ್ತಿದ್ದ. ಅವಹೇಳನಕಾರಿ ಹಾಗೂ ಕನಿಷ್ಠ ಮಟ್ಟದ ಕಾಮೆಂಟ್ ಮಾಡಿ ಶಾಸಕರ ಅಭಿಮಾನಿ ಸಮಾಜ ಬಾಂಧವರ ಮಧ್ಯೆ ವೈಷಮ್ಯ ಉಂಟುಮಾಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರವೀಂದ್ರ ಪಟಗಾರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗೋಪಾಲ ಶೆಟ್ಟಿ, ಬಿಜೆಪಿ ಯುವಮೋರ್ಚಾ ತಾಲೂಕು ಉಪಾಧ್ಯಕ್ಷ ಪ್ರಜ್ವಲ ನಾಯಕ, ಸದಸ್ಯರಾದ ವಿಶಾಲ ಶೇಟ್, ಚಿನ್ಮಯ ಕಾಮತ, ವಿಕ್ರಮ ಪುರೋಹಿತ್ ಸೇರಿದಂತೆ ಮತ್ತಿತರರು ದೂರು ನೀಡಿದ್ದಾರೆ.