ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ 28ರಂದು ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷ ಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ಮುಂದಿನ ದಿನಗಳಲ್ಲಿ ಅದು ರಾಮನ್ ಪರಿಣಾಮವೆಂದೇ ಪ್ರಸಿದ್ಧವಾಯಿತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ.