ಪ.ಜಾತಿ ಪ್ರಮಾಣ ಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ

ಬಹಿಷ್ಕಾರ
Advertisement

ಕುಷ್ಟಗಿ: ತಾಲೂಕಿನ ಹಾಬಲಕಟ್ಟಿ ಗ್ರಾಮದ ಭೋವಿ ಸಮುದಾಯದವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿ ತಹಶೀಲ್ದಾರ್ ಮನವಿ ಸಲ್ಲಿಸಿದರು.
ಹಾಬಲಕಟ್ಟಿ ಗ್ರಾಮದಲ್ಲಿ ವಾಸವಾಗಿದ್ದ ಭೋವಿ ಸಮುದಾಯದವರು ಕಂದಾಯ ಇಲಾಖೆ ವತಿಯಿಂದ ೧೯೫೪ರಿಂದ ೨೦೧೧ರ ವರೆಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದೇವು. ೨೦೧೧ರ ನಂತರ ಸಮುದಾಯದವರಿಗೆ ನೀಡಬೇಕಾದಂತಹ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಚುನಾವಣೆ ಬಹಿಷ್ಕರಿಸಲು ಭೋವಿ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕುಷ್ಟಗಿಯ ತಹಶೀಲ್ದಾರ್ ಕಚೇರಿ ಎದುರು ನಿರಂತರ ೧೦೧ ದಿನ ಧರಣಿ ನಡೆಸಿದ ಪರಿಣಾಮವಾಗಿ ವಿ.ಎಸ್. ಉಗ್ರಪ್ಪ ಅವರ ನೇತೃತ್ವದ ಸಮಿತಿಯವರು ಮೂಲ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಇವರೆ ಮೂಲ “ಭೋವಿ” ಇವರಿಗೆ ಎಸ್.ಸಿ. ಪ್ರಮಾಣ ಪತ್ರ ನೀಡಬೇಕೆಂದು ತಿಳಿಸಿದ್ದರು. ಆದರೂ ಇಲ್ಲಿಯ ಹಿಂದಿನ ತಹಶೀಲ್ದಾರರು, ಈಗಿನ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ನಿರ್ಲಕ್ಷಿಸಿದರು ಎಂದು ದೂರಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಮ್ಮ ಜನಾಂಗದವರಿದ್ದು, ಅವರು ಎಸ್.ಸಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಬಲಕಟ್ಟಿ ಗ್ರಾಮಕ್ಕೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಆದ ಕಾರಣ ನಮ್ಮ ಜನಾಂಗದವರು ಮುಂದಿನ ಎಲ್ಲಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಶರಣಪ್ಪ ಭೋವಿ ತಿಳಿಸಿದರು.