ಪ್ರಾರ್ಥನಾ ಸ್ಥಳ ತೆರವಿಗೆ ಜ. 5ರ ಗಡುವು

Advertisement

ಬೆಳಗಾವಿ: ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಪ್ರಾರ್ಥನಾ ಸ್ಥಳದ ತೆರವಿಗೆ ಶಾಸಕ ಅಭಯ ಪಾಟೀಲರು ತಮ್ಮ ನೂರಾರು ಬೆಂಬಲಿಗರೊಂದಿಗೆ ಹೋಗಿದ್ದರಿಂದ ಜೈತುನ್ ಮಾಳಾದಲ್ಲಿ ಕೆಲ ಹೊತ್ತು ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದ ಖಾಸಗಿ ಜಾಗೆಯಲ್ಲಿ ಯಾವುದೇ ಅನುಮತಿ ಪಡೆಯದೇ ಮನೆಯನ್ನು ಪ್ರಾರ್ಥನೆಗೆ ಬಳಕೆ ಮಾಡುತ್ತಿದ್ದರು.
ಕಳೆದ ಒಂದು ವರ್ಷದಿಂದ ಈ ಬಗ್ಗೆ ಅಲ್ಲಿನ ನಿವಾಸಿಗಳು ದೂರು ನೀಡಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಏತನ್ಮಧ್ಯೆ ಪ್ರಾರ್ಥನಾ ಸ್ಥಳದಲ್ಲಿ ಮೈಕ್ ಹಚ್ಚಿದ್ದರಿಂದ ಅಲ್ಲಿನ ನಿವಾಸಿಗಳು ಮತ್ತಷ್ಟು ಆಕ್ರೋಶಿತಗೊಂಡಿದ್ದರು.
ಈ ಬಗ್ಗೆ ಬೆಳಗಾವಿ ತಹಶೀಲ್ದಾರರು ಮತ್ತು ಗ್ರಾಮ ಪಂಚಾಯತಿಯವರು ಪ್ರಾರ್ಥನೆ ಮಾಡುವುದಕ್ಕಾಗಿ ಯಾವುದೇ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ದಿನ ರಾತ್ರಿ ೧೧ ಕ್ಕೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರು ಸಾವಿರಾರು ಕಾರ್ಯಕರ್ತರೊಂದಿಗೆ ಜೆಸಿಬಿಯೊಂದಿಗೆ ಪ್ರಾರ್ಥನಾ ಸ್ಥಳ ತೆರವಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರು ಅದಕ್ಕೆ ಅವಕಾಶ ಕೊಡದೇ ಇದ್ದ ಸಂದರ್ಭದಲ್ಲಿ ವಾಗ್ವಾದ ಕೂಡ ನಡೆಯಿತು.
ಒಂದು ಹಂತದಲ್ಲಿ ಪೊಲೀಸರು ಮತ್ತೇ ಕಾಲಾವಕಾಶ ಕೊಡಿ ಎನ್ನುವ ನೆಪ ಹೇಳುತ್ತಿದ್ದ ಸಂದರ್ಭದಲ್ಲಿ ಶಾಸಕರು ಪೊಲೀಸರೊಂದಿಗೆ ತೀವ್ರತರಹದ ವಾಗ್ದಾಳಿ ನಡೆಸಿದರು. ಒಂದು ಹಂತದಲ್ಲಿ ಪೊಲೀಸರು ಮತ್ತೇ ಕಾನೂನು ಸುವ್ಯವಸ್ಥೆ ನೆಪ ಹೇಳುತ್ತಿದ್ದಾಗ ಶಾಸಕರ ಬೆಂಬಲಿಗರು ಜೆಸಿಬಿಯೊಂದಿಗೆ ಮುನ್ನುಗ್ಗಲು ಯತ್ನಿಸಿದಾಗ ಎಸಿಪಿ, ಡಿಸಿಪಿಗಳು ಮುಂದಾಗಿ ತಡೆದರು. ಈ ಸಂದರ್ಭದಲ್ಲಿ ಶಾಸಕರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಾಗ ಅಧಿಕಾರಿಗಳಿಗೆ ದಿಕ್ಕು ತೋಚದ ಪರಿಸ್ಥಿತಿ ಬಂದಿತು.
ಮಧ್ಯರಾತ್ರಿ ಸ್ಥಳಕ್ಕೆ ಧಾವಿಸಿದ ಡಿಸಿ, ಪೊಲೀಸ್ ಆಯುಕ್ತರು
ಕೊನೆಗೆ ಸ್ಥಳದಲ್ಲಿದ್ದ ಎಸಿಪಿಯವರು ಪರಿಸ್ಥಿತಿಯನ್ನು ವಿವರಿಸಿದಾದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು ಬೆಳಗಿನ ಜಾವ 3ಕ್ಕೆ ಸ್ಥಳಕ್ಕೆ ಬಂದು ಮಾತುಕತೆ ನಡೆಸಿದರು,
ಈ ಸಂದರ್ಭದಲ್ಲಿಯೂ ಕೂಡ ಶಾಸಕರು ಅವರೊಂದಿಗೆ ವಾಗ್ವಾದ ನಡೆಸಿದರು, ಕೊನೆಗೆ ಜನವರಿ 5ರೊಳಗೆ ತೆರವು ಮಾಡದಿದ್ದರೆ ಮುಂದಿನ ಕ್ರಮವನ್ನು ನಾವೇ ತೆಗೆದುಕೊಳ್ಳುತ್ತೇವೆ ಎಂದು ಶಾಸಕರು ಸ್ಪಷ್ಟಪಡಿಸಿದರು.