ಧಾರವಾಡ: ಸರ್ವೇಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿ ಇದ್ದರೂ ನನ್ನ ಹೆಸರು ಪಟ್ಟಿಯಿಂದ ತಪ್ಪದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ. ಇದರಿಂದ ನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಧಾರವಾಡ ಗ್ರಾಮೀಣ ಟಿಕೆಟ್ ಆಕಾಂಕ್ಷಿ ತವನಪ್ಪ ಅಷ್ಟಗಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಕೇವಲ ನನಗೆ ಅನ್ಯಾಯ ಮಾಡಿಲ್ಲ. ಇಡೀ ಜೈನ್ ಸಮಾಜಕ್ಕೆ ಮೋಸ ಮಾಡಿದೆ. ಇದಕ್ಕೆ ಮೂಲ ಕಾರಣ ಬಸವರಾಜ ಬೊಮ್ಮಾಯಿ ಅವರು. ಅಮೃತ ದೇಸಾಯಿ ಅವರು ಈ ಚುನಾವಣೆಯಲ್ಲಿ ಸೋಲು ಅನುಭವಿಸುತ್ತಾರೆ. ಅವರ ವಿರೋಧಿ ಅಲೆ ಇದೆ ಎಂದು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೆ. ಆದರೂ ಅವರಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ನೋವುಂಟಾಗಿದೆ ಎಂದರು.
ರಾಜಕೀಯದ ಈ ಎಲ್ಲ ಬೆಳವಣಿಗೆಯಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಎರಡು ದಿನಗಳಲ್ಲಿ ಬೆಂಬಲಿಗರ, ಅಭಿಮಾನಿಗಳ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.