ಪ್ರಸ್ತಾಪಗಳೇ ಕಾಣದ ಪ್ರಜಾಸತ್ತೆಯ ಕಾಳಗ

hegde sir
Advertisement

ಕರ್ನಾಟಕದ ರಾಜಕೀಯ ಈಗ ಕಾದ ಕಾವಲಿಯಾಗಿದೆ. ಈ ಕಾವಲಿಯ ಮೇಲೆ ಸುರಿಯುತ್ತಿರುವುದು ಮಾತಿನ ಉದ್ಗಾರ, ಹೀಗಳಿಕೆ, ಅಸಹ್ಯ, ಅನಿಷ್ಠ, ಬಯ್ಗುಳಗಳ ಮಳೆ. ಹೀಗಾಗಿ ಬಸವಳಿಯುತ್ತಿರುವವರು ಅಮಾಯಕ ಜನ. ಚುನಾವಣೆ ಎಂದರೆ ಪ್ರಜಾತಂತ್ರದ ಹಬ್ಬ. ಆದರೆ ಇತ್ತೀಚಿನ ದಶಕಗಳಲ್ಲಿ ಹಾಗಿಲ್ಲ ಬಿಡಿ.
ಯಾಕೆ ಹೀಗೆ? ಯಾರು ಕಾರಣ? ಯಾವ ದೋಷ? ಏನೆಲ್ಲ ತಂತ್ರ, ದುಷ್ಟ ಹೇತುಗಳು ಎನ್ನುವ ಚರ್ಚೆಗೆ ಈಗ ಕಾಲಮಿಂಚಿದೆ. ಈಗೇನಿದ್ದರೂ ಚುನಾವಣೆ ಎಂದರೆ ದೋಚುವ, ಠೇಂಕರಿಸುವ, ಆಮಿಷದ ಮತ್ತು ವೈಷಮ್ಯದ ಕರಾಳ ದಂಧೆ. ಈ ದಂಧೆಯ ನಿವಾರಣೆಗೆ ಪ್ರಯತ್ನಿಸಿ ಕೈಚೆಲ್ಲಿದವರೇ ಹೆಚ್ಚು. ಏಕೆಂದರೆ ಇಲ್ಲಿ ಉದಾತ್ತ ಮಾತನಾಡುವವ, ಉಚಿತ ಸಲಹೆ ನೀಡುವವ, ವೈಚಾರಿಕ ಕ್ರಾಂತಿ ಬಿತ್ತುವವ, ವ್ಯವಸ್ಥೆಯ ವಿರುದ್ಧ ಕೆಂಡದ ಮಳೆ ಸುರಿಯುವವ ಈ ಯಾರೂ ಜವಾಬ್ದಾರನೇ ಅಲ್ಲ! ಆತ ಬರೀ ವೈಚಾರಿಕ- ಬೂಟಾಟಿಕೆಯವ ಹೊರತು ಕಾರ್ಯಸಾಧ್ಯ ಮಾಡುವ ಮನುಷ್ಯನಲ್ಲ. ಎಲ್ಲ ರಾಜಕೀಯ ಪಕ್ಷಗಳಿಗೆ, ಚುನಾವಣಾ ಅಭ್ಯರ್ಥಿಗಳಿಗೆ ಗೊತ್ತು, ತಮ್ಮನ್ನು ಗೆಲ್ಲಿಸುವವರು, ಮತ ಹಾಕುವವರು ಏನನ್ನು ಅಪೇಕ್ಷಿಸುತ್ತಾರೆ ಹಾಗೂ ಅವ ರನ್ನು ಓಲೈಸಿಕೊಳ್ಳುವುದು ಹೇಗೆ ಎಂಬುದು. ತನ್ನ ಮತದಾರನ ಆಸೆ ಆಮಿಷಗಳನ್ನು ಈಡೇರಿಸಿದರೆ ಆಯಿತು. ಇಷ್ಟಕ್ಕೂ ಈ ಚುನಾವಣೆಯ ಹೊಸ್ತಿಲಲ್ಲಿ ನಿಂತು ಈ ರಾಜಕೀಯ ಪಕ್ಷಗಳ ಪ್ರಣಾಳಿಕೆ, ಭರವಸೆ, ವಾಗ್ದಾನಗಳನ್ನು ನೋಡಿದರೆ ಈ ರಾಜ್ಯ ಎಂದೋ ಸುಭೀಕ್ಷ- ಸುರಕ್ಷಿತ- ಸುಂದರ ಶಾಂತಿ ಬನವಾಗಬೇಕಿತ್ತು ಅಲ್ಲವೇ? ಐವತ್ತು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಯಾವ ಯಾವ ಭರವಸೆ ನೀಡಲಾಗಿತ್ತೋ ಅವೇ ಭರವಸೆಗಳು ಪ್ರಣಾಳಿಕೆಯ ಸ್ವರೂಪದಲ್ಲಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಮುಂದುವರಿಯುತ್ತಿರುವುದನ್ನು ಕಾಣಬಹುದು. ಈ ಪ್ರಣಾಳಿಕೆ ಭರವಸೆಗಳೆಲ್ಲ ರಾಜಕೀಯ ಪಕ್ಷಗಳಿಗೆ ಒಂದು ಸಂಪ್ರದಾಯ ಅಷ್ಟೇ!
ಹಾಗಂತ, ಇವನ್ನು ಈಡೇರಿಸುವ ಬದ್ಧತೆ ತೋರಿದ್ದು ತುಂಬ ತುಂಬ ಅಪರೂಪ. ಪ್ರಣಾಳಿಕೆಗಳಿನ್ನೂ ೨೩ರ ಚುನಾವಣೆಗೆ ಸಿದ್ಧವಾಗಿಲ್ಲ. ಆದರೆ ಈಗಾಗಲೇ ಗ್ಯಾರಂಟಿ ಕಾರ್ಡುಗಳು ಮತದಾರನ ಮನೆಯ ಬಾಗಿಲು ಬಡಿದಿವೆ. ಗ್ಯಾರಂಟಿಗೆ ಪ್ರತಿಯಾಗಿ, ನಮ್ಮ ಆಶ್ವಾಸನೆ, ನಮ್ಮ ಬದ್ಧತೆ ಎನ್ನುವ ಮತ್ತೊಂದು ಪಕ್ಷದ, ಸರ್ಕಾರ ಪ್ರತಿನಿಧಿಸುವ ಮಂತ್ರಿ ಮಹೋದಯರ ವಾಗ್ದಾನ, ಜೊತೆಗೆ ಅಲ್ಪ ಸ್ವಲ್ಪ ಅನುಷ್ಠಾನ ಕೂಡ ನಡೆದಿದೆ.
ಪರಸ್ಪರ ಟೀಕೆ, ಆರೋಪ, ಪ್ರತ್ಯಾರೋಪ, ಕೀಳು ಮಟ್ಟದ ಶಬ್ದ ಪ್ರಯೋಗ, ದಮ್- ತಾಕತ್ ಇತ್ಯಾದಿಗಳೇ ಭರಾಟೆಯಲ್ಲಿವೆ. ೨೦೨೩ರ ಕರ್ನಾಟಕ ಚುನಾವಣೆಯ ಇಷ್ಯೂ (ಮುದ್ದೆ) ಯಾವುದು ಎಂಬುದನ್ನು ರಾಜಕೀಯ ಪಕ್ಷಗಳು ಇನ್ನೂ ಹುಡುಕಾಟದ ಹಾದಿಯಲ್ಲಿಯೇ ಇವೆ. ಜನತೆಯೂ ತಮ್ಮ ಅಪೇಕ್ಷೆಗೆ ಅನುಗುಣವಾಗಿ ಯಾವ ಕಾರ್ಯಕ್ರಮ, ಯಾವುಂದಾದರು ಬೆಳಕು ಎಲ್ಲಿಯಾದರೂ ದೊರಕೀತೋ ಎನ್ನುವುದನ್ನು ದೊಡ್ಡ ಕಣ್ಣು ಬಿಟ್ಟು, ಬಾಯಿ ಅಗಲಿಸಿ ಕಾದು ಕುಳಿತಿದ್ದಾರೆ.
ನಿಜ. ಕರ್ನಾಟಕದ ಹತ್ತಾರು ಸಮಸ್ಯೆಗಳು, ಬೇಕು ಬೇಡಗಳು ಪ್ರಸಕ್ತ ಚುನಾವಣೆಯ ಇಷ್ಯೂ ಆಗಬೇಕಿತ್ತು. ಆದರೆ ಪ್ರಸ್ತುತ ಚುನಾವಣಾ ಕಣ ಅವಲೋಕಿಸಿದರೆ ಬಹುಶಃ ಯಾವುದೇ ಮುದ್ದೆ ಇಲ್ಲದೇ ರಾಜಕೀಯ ಪಕ್ಷಗಳು ಕೇವಲ ತಂತ್ರ- ಪ್ರತಿತಂತ್ರದ ಮೂಲಕವೇ ಚುನಾವಣೆ ನಡೆಸುವ ಒಟ್ಟಾರೆ ಹುನ್ನಾರ ಅಡಗಿದಂತೆ ಕಾಣುತ್ತಿದೆ.
ಈಗಾಗಲೇ ಕುಕ್ಕರ್, ಇಸ್ತ್ರೀ ಪೆಟ್ಟಿಗೆ, ಸೈಕಲ್ಲು, ಮೋಟರ್ ಸೈಕಲ್ಲು, ಬಟ್ಟೆ, ಸೀರೆ, ಪಂಚೆ, ಮದ್ಯ, ಸಾರಾಯಿ, ಕೈಗಡಿಯಾರ ಎಲ್ಲವೂ ಕೂಡ ಪ್ರತಿ ನಗರಗಳಲ್ಲಿ, ಹಳ್ಳಿಗಳಲ್ಲಿ ಸಂಗ್ರಹವಾಗಿದೆ. ಅಲ್ಲಲ್ಲಿ ವಶಪಡಿಸಿಕೊಳ್ಳುವ ನಾಟಕಗಳೂ ನಡೆಯುತ್ತಿವೆ.
ಈ ಮಧ್ಯೆ ಇದೇ ಪ್ರಥಮ ಬಾರಿಗೆ ಚುನಾವಣಾ ಅಂಗಳಕ್ಕೆ ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಕೆಂಪೇಗೌಡ, ಶಂಕರಾಚಾರ್ಯ, ವಿವೇಕಾನಂದ, ಶಿವಾಜಿ, ಟಿಪ್ಪೂ, ಕಿತ್ತೂರು ರಾಣಿ ಚನ್ನಮ್ಮ, ಉರಿಗೌಡ- ನಂಜೇಗೌಡ ಇತ್ಯಾದಿ ಪ್ರತಿಮೆಗಳು ಪ್ರಧಾನ ಪಾತ್ರ ವಹಿಸಿವೆ!. ಚುನಾವಣೆ ಎಂದರೆ ಜಾತಿ ಮತ್ತು ಹಣದ ಬಲಾಬಲ ಪ್ರದರ್ಶನ ಎನ್ನುವ ರೀತಿಯ ಜೊತೆಗೆ, ಭಾವನಾತ್ಮಕ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮೂಲಕ ಈ ಹೊಸ ತಂತ್ರವು ಜೋರಾಗಿ ನಡೆದಿದೆ.
ಇದರ ಜಯ ಅಪಜಯ, ಯಶಸ್ಸು- ಅಪಯಶಸ್ಸುಗಳ ಲಾಭ-ನಷ್ಟ ಪಡೆಯಲು ಪೈಪೋಟಿಯೂ ಈಗಾಗಲೇ ಆರಂಭವಾಗಿದೆ. ಹಾಗಾಗಿ ತಂತ್ರಗಾರಿಕೆ ಮತ್ತು ಮತಬ್ಯಾಂಕ್ ಗಟ್ಟಿಗೊಳಿಸುವ ಯತ್ನಗಳೇ ಹೆಚ್ಚಿರುವಾಗ ಜನಸಾಮಾನ್ಯರ ಬದುಕಿನ ಪ್ರಶ್ನೆಯ ಜೊತೆಗೆ, ಒಟ್ಟಾರೆ ಸರ್ವಾಂಗೀಣ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ನೆನೆಗುದಿಗೆ ಬಿದ್ದಿರುವುದು ಸ್ಪಷ್ಟ.
ಕರ್ನಾಟಕದಲ್ಲಿ ಚುನಾವಣಾ ಇಷ್ಯೂಗಳು ಆಗುವ ಯಾವ ವಿಷಯಗಳೂ ಇಲ್ಲವೇ ಇಲ್ಲವೇ? ಎಂದು ಪ್ರಶ್ನಿಸಬೇಕಾಗಿದೆ. ಏಕೆಂದರೆ ಯಾವುದೇ ವಿಷಯಗಳು ಈವರೆಗೆ ಇಷ್ಯೂ ಆಗಿಯೇ ಇಲ್ಲ. ಹಾಗಂತ, ಅವನ್ನು ಮುನ್ನೆಲೆಗೆ ತರುವುದರಿಂದ ಮತ ಗಳಿಕೆಯಲ್ಲಿ ಪರಿಣಾಮ ಕಂಡುಕೊಳ್ಳುವಲ್ಲಿ ಮತದಾರ ಹಾಗೂ ರಾಜಕೀಯ ಪಕ್ಷಗಳೆರಡೂ ಆಸಕ್ತಿ ತೋರುತ್ತಿಲ್ಲವೇನೋ?
ಕರ್ನಾಟಕದ ಕೃಷಿ ಕ್ಷೇತ್ರದ ನೂರಾರು ಸಮಸ್ಯೆಗಳಿಗೆ, ನೀರಾವರಿ ಯೋಜನೆಗಳ ವಿವಾದಗಳಿವೆ, ಮೂಲಭೂತ ಸೌಕರ್ಯಗಳ ತೊಡಕುಗಳಿಗೆ, ಒಟ್ಟಾರೆ ಆಡಳಿತ ವ್ಯವಸ್ಥೆಯ ನಿಷ್ಕಿçಯತೆ, ಇದರೊಟ್ಟಿಗೆ ನಾಡಿನ ನುಡಿ ಮತ್ತು ನಡೆಯನ್ನು ಉಳಿಸಿಕೊಳ್ಳುವ ಬೆಳೆಸುವ ಯೋಜನೆಗಳ್ಯಾವುವೂ ಇಲ್ಲಿ ಧ್ವನಿಯಾಗುತ್ತಿಲ್ಲ.
೧೯೮೩ರ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕ ಚಳವಳಿಯ ನಂತರ ಕನ್ನಡ ಈ ನಾಡಿನ ಪ್ರಥಮ ಭಾಷೆ, ಇದಕ್ಕೆ ಅಗ್ರಸ್ಥಾನ ಎನ್ನುವುದನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗಿತ್ತು. ಆಗ ತಾನೇ ಮುಗಿದ ಗೋಕಾಕ ಚಳವಳಿ ಕಾವು ಸುಡುತ್ತಿದ್ದ ಹಿನ್ನೆಲೆಯಲ್ಲಿ ಆ ಚುನಾವಣೆಯಲ್ಲಿ ಎರಡೇ ವಿಷಯಗಳು ಪ್ರಧಾನವಾಗಿ ರಾಜ್ಯದ ಚುನಾವಣೆಯ ಇಶ್ಯು ಆಗಿತ್ತು. ಒಂದು ಕರ್ನಾಟಕದಲ್ಲಿ ಕನ್ನಡ ಭಾಷೆ, ಮತ್ತೊಂದು ರೈತರ ಹೋರಾಟ.
ತಮಾಷೆ ಎಂದರೆ ಅಂದು ಎತ್ತಿದ ಪ್ರಶ್ನೆಗಳು ಇಂದೂ ಈಡೇರಿಲ್ಲ. ಕನ್ನಡ ಪ್ರಥಮ ಭಾಷೆಯಾಗಬೇಕು, ಕನ್ನಡವೇ ಅಗ್ರಗಣ್ಯ ಎನ್ನುವ ಶಾಸನ ಮೊನ್ನೆಮೊನ್ನೆ ವಿಧಾನ ಮಂಡಲದಲ್ಲಿ ಮಂಡನೆಯಾಗಿದೆ. ಆದರಿನ್ನೂ ಕಾಯ್ದೆ ಸ್ವರೂಪವನ್ನೇ ಪಡೆದಿಲ್ಲ. ಕರ್ನಾಟಕ ಗಡಿ ಪ್ರದೇಶ ಸಂರಕ್ಷಣಾ ಪ್ರಾಧಿಕಾರ ರಚನೆಯಾಯಿತು. ಕನ್ನಡಿಗರ ಉದ್ಯೋಗಕ್ಕಾಗಿ ಸರೋಜಿನಿ ಮಹಿಷಿ ವರದಿ ಮಂಡನೆಯಾಯಿತು. ಔದ್ಯಮಿಕ ಕ್ಷೇತ್ರದಲ್ಲಿ ಕನ್ನಡಿಗರಿಗೆ ಮೀಸಲು ಎಂಬ ಮಾತು ಕೇಳಿ ಬಂತು. ಆದರೆ ಯಾವುದೂ ಅನುಷ್ಠಾನದಲ್ಲಿ ಬರಲಿಲ್ಲ.
ಹೌದು. ಈ ಸಾರೆಯೂ ಕನ್ನಡ ಚುನಾವಣಾ ಇಷ್ಯೂ ಆಗಲಿಲ್ಲ ಏಕೆ? ಹಾಗೆಯೇ ಇಲ್ಲಿಯ ಜಲಸಂಪನ್ಮೂಲಗಳ ಸದ್ಬಳಕೆ, ವಾಣಿಜ್ಯೋದ್ಯಮದ ಪೂರಕ ಬೆಳವಣಿಗೆಯ ಸಮಗ್ರ ಯೋಜನೆ, ಉಪನಗರಗಳ ಮೂಲಭೂತ ಸೌಕರ್ಯ, ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸಮಸ್ಯೆ, ರಾಜ್ಯದ ಅರಣ್ಯ, ನೆಲ, ಕಡಲು, ಗಾಳಿ ಇವುಗಳ ಸಂರಕ್ಷಣೆ ಇವು ಚುನಾವಣೆಯ ಪ್ರಧಾನ ಸಂಗತಿಯೇ ಆಗುತ್ತಿಲ್ಲ !
ರಾಷ್ಟ್ರೀಯ ಪಕ್ಷಗಳಷ್ಟೇ ಅಲ್ಲ. ಪ್ರಾದೇಶಿಕ ಪಕ್ಷವೂ ಕೂಡ ಪ್ರಾದೇಶಿಕವಾಗಿಯೇ ತಮ್ಮ ಸಮಸ್ಯೆಗಳ ಹುಡುಕಾಟದಲ್ಲಿಯೇ ಉಳಿದವು ವಿನಾ ಅವ್ಯಾವುವೂ ಸಮಗ್ರವಾಗಿ ಕಂಡೇ ಇಲ್ಲ. ಅದರ ಪರಿಣಾಮವೇ ಪ್ರಾದೇಶಿಕ ಪಕ್ಷ ಕರ್ನಾಟಕದಲ್ಲಿ ಕನ್ನಡಿಗರ ಧ್ವನಿಯಾಗಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ, ಪ್ರತಿಪಕ್ಷದ ನಾಯಕರು, ಹೈಕಮಾಂಡ್ ನೇತಾರರೆಲ್ಲ ರಾಜ್ಯಕ್ಕೆ ಬಂದು ನಾಲ್ಕಾರು ಶಬ್ದ ಕನ್ನಡ ನುಡಿಮುತ್ತು ಉದುರಿಸುತ್ತಾರೆ. ಕರ್ನಾಟಕದ ಸಂಸ್ಕೃತಿಯನ್ನು ಕೊಂಡಾಡುತ್ತಾರೆ. ಆದರೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇಲಾಖೆಗಳಲ್ಲಿ, ಬ್ಯಾಂಕ್‌ಗಳಲ್ಲಿ, ಉದ್ಯಮಗಳಲ್ಲಿ, ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲೂ ಕೂಡ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲೂ ಅವಕಾಶ ನೀಡುತ್ತಿಲ್ಲ. ಇನ್ನು ಮೀಸಲು ನೀಡುವುದು ಎಂತು?
ಇತ್ತೀಚಿಗೆ ಹಳ್ಳಿಯ ರೈತನೊಬ್ಬನ ಮಗ ರಾಜಕೀಯ ಪಕ್ಷಗಳಿಗೊಂದು ಸವಾಲು ಎಸೆದ. ನಿಮ್ಮ ಪ್ರಣಾಳಿಕೆಯಲ್ಲಿ ಹಳ್ಳಿಯ ರೈತನಿಗೆ ಹೆಣ್ಣು ಹುಡುಕಿ ಕೊಡುತ್ತೇವೆ ಎಂಬುದನ್ನು ಸೇರಿಸಿ ಎಂದು! ಕೇಳಲು ತಮಾಷೆ. ಆದರೆ ಸಾಮಾಜಿಕ ವ್ಯವಸ್ಥೆ, ದುಸ್ಥಿತಿ ಯಾವ ಮಟ್ಟದಲ್ಲಿದೆ ಎಂದರೆ ಹಳ್ಳಿಯ ರೈತನಿಗೆ ಯಾವುದೇ ಸಮುದಾಯ ಹೆಣ್ಣು ಕೊಡುವುದಿಲ್ಲ. ಎಂತಹ ಗಂಭೀರ ವಿಷಯವಿದು…? ಎಲ್ಲ ಸೌಲಭ್ಯವಿದ್ದರೂ ಆತನಿಗೆ ಹೆಣ್ಣು ಸಿಗುತ್ತಿಲ್ಲ. ಗ್ರಾಮೀಣ ಶಾಲೆಗಳನ್ನು ಮುಚ್ಚುವ ಸ್ಥಿತಿ ಇದೆ. ಇಲ್ಲೆಲ್ಲ ಎರಡು ಮೂರು ವಿದ್ಯಾರ್ಥಿಗಳು ಅಷ್ಟೇ. ಕಾರಣ ಗ್ರಾಮಗಳು ಬೀಳಾಗಿವೆ. ನಗರ ಬೆಳೆಯುತ್ತಿದೆ. ಕೃಷಿ ಉತ್ಪಾದನೆ ಕುಂಠಿತವಾಗುತ್ತಿದೆ. ವೃದ್ಧಾಶ್ರಮಗಳು ಹೆಚ್ಚುತ್ತಿವೆ.
ಇವೆಲ್ಲ ಚುನಾವಣೆ ಇಷ್ಯೂಗಳಾಗಬೇಕಿದ್ದವಲ್ಲವೇ? ಬೇಕಿಲ್ಲ. ಏಕೆಂದರೆ ರಾಜಕೀಯ ಪಕ್ಷಗಳಿಗೆ ಇವು ವಿಷಯವೇ ಅಲ್ಲ.
ರೈತರ ಹೊಲಗಳಿಗೆ ನೀರು ಕೊಟ್ಟರೆ ತಮ್ಮ ಹಿಂದೆ ಅಲೆಯುವ ಹುಡುಗರು ಯಾರು? ಮುಂದಿನ ಚುನಾವಣೆಯ ವಿಷಯವೇನು? ಒಂದು ಆಲಮಟ್ಟಿ ಆಣೆಕಟ್ಟು ಐವತ್ತು ವರ್ಷದ ಕರ್ನಾಟಕ ರಾಜಕಾರಣವನ್ನು ಅತ್ತ ಇತ್ತ ಎಳೆದುಕೊಂಡು ಬಂತು. ಕಾವೇರಿ ನದಿ ಎಪ್ಪತ್ತು ವರ್ಷ ರಾಜಕಾರಣವನ್ನು ಜೀವಂತ ಇಟ್ಟಿತು. ಈಗ ಎತ್ತಿನ ಹೊಳೆ, ಕಳಸಾ ಬಂಡೂರಿ, ಮಹದಾಯಿ, ತುಂಗಭದ್ರಾ ಹೂಳೆತ್ತುವುದು, ಕಾರಂಜಾ ಇತ್ಯಾದಿ ಯೋಜನೆಗಳು ಕಳೆದ ನಾಲ್ಕು ಚುನಾವಣೆಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿವೆ. ಇದು ಇವನ್ನು ಇನ್ನೂ ಜೀವಂತವಾಗಿಯೇ ಇಟ್ಟುಕೊಳ್ಳುವ ಹುನ್ನಾರ ಅಷ್ಟೇ.
ಈಗ ನೋಡಿ, ನಾವು ಅಧಿಕಾರಕ್ಕೆ ಬಂದರೆ ೨೪ ಗಂಟೆಗಳಲ್ಲಿ, ನಾವು ಅಧಿಕಾರಕ್ಕೆ ಬಂದರೆ ಮೂರು ತಿಂಗಳಿನಲ್ಲಿ, ನಾವು ಅಧಿಕಾರಕ್ಕೆ ಬಂದರೆ ೭೮ ಗಂಟೆಗಳಲ್ಲಿ ಇತ್ಯಾದಿ ಘೋಷಣೆಗಳು ರಾಜಕೀಯ ಮುಖಂಡರಿಂದ ಕೇಳಿ ಬರುತ್ತಿವೆ. ಅಂದರೆ ಸಮಸ್ಯೆಗಳನ್ನು ಜೀವಂತ ಇಡುವುದಷ್ಟೇ ಎಲ್ಲರ ಏಕೈಕ “ಇಷ್ಯೂ” !! ಹಾಗಾಗಿ ಈ ಬಾರಿ ಕರ್ನಾಟಕದ ಚುನಾವಣೆಯಲ್ಲಿ ಯಾವುದೇ ಇಷ್ಯೂಗಳೇ ಇಲ್ಲ. ಕೇವಲ ಮೀಸಲಾತಿ, ಘರ್ಷಣೆ, ಭ್ರಷ್ಟಾಚಾರ…
ಹೌದು, ಭ್ರಷ್ಟಾಚಾರವನ್ನಾದರೂ ಪ್ರಧಾನವಾಗಿ ಈ ಸಾರೆ ತೆಗೆದುಕೊಳ್ಳಬಹುದಿತ್ತು. ಕೇವಲ ಶೇಕಡಾ ೧೦ರಷ್ಟು, ಶೇಕಡಾ ೪೦ರಷ್ಟು, ಶೇಕಡಾ ೫೦ರಷ್ಟು ಎಂದು ಆರೋಪ ಪ್ರತ್ಯಾರೋಪಗಳನ್ನು ಮಾಡುವರೇ ಹೊರತು, ಸಂಪೂರ್ಣ ಭ್ರಷ್ಟಾಚಾರ ನಿರ್ಮೂಲನೆಯ ಬದ್ಧತೆಯನ್ನು ಯಾವನೂ ತೋರಿಸುತ್ತಿಲ್ಲ. ಜಾತಿಗೊಂದು ಪ್ರಾಧಿಕಾರ, ಒಂದು ಪುತ್ಥಳಿ ಇವು ದೊರೆತರೆ ಜನಕ್ಕೆ ಸಂತೃಪ್ತಿ. ಹಾಗಿದ್ದಾಗ ಇಷ್ಯೂಗಳ ಮೇಲೆ ಚುನಾವಣೆ ನಡೆಯಬೇಕು ಎನ್ನುವುದು ನಮ್ಮ ಹಗಲುಗನಸು ಅಷ್ಟೇ.