ಶಾಲೆಯನ್ನು ಬಿಡುವುದೆಂದು ತೀರ್ಮಾನವಾದ ಮೇಲೆ ಅನೇಕ ಕರ್ತವ್ಯಗಳನ್ನು ನಾನು ಮಾಡಬೇಕಿತ್ತು. ಮೊದಲು ನನ್ನ ಸ್ಥಾನಕ್ಕೆ ಬರುವವರ ಆಯ್ಕೆಯಾಗಬೇಕು. ಆ ಜವಾಬ್ದಾರಿಯನ್ನು ಅಧ್ಯಕ್ಷರು ನನಗೇ ವಹಿಸಿದ್ದರು. ನಾನು ಮತ್ತು ಇನ್ನೊಬ್ಬ ನಿರ್ದೇಶಕರು ನೂರಾರು ಜನರನ್ನು ಸಂಪರ್ಕಿಸಿ ಹತ್ತಾರು ಜನರನ್ನು ಕರೆದು ಸಂದರ್ಶನ ಮಾಡಿ ಕೊನೆಗೆ ಮೂವರನ್ನು ಆಯ್ಕೆ ಮಾಡಿದೆವು. ಕೊನೆಗೆ ಅಧ್ಯಕ್ಷರ ಸಮ್ಮುಖದಲ್ಲಿ ಕೊನೆಯ ಸಂದರ್ಶನವನ್ನು ನಡೆಸಿ ಒಬ್ಬರನ್ನು ಆರಿಸಿದೆವು. ಅವರಿಗೆ ಒಳ್ಳೆಯ ಅನುಭವವಿತ್ತು, ಸಂಸ್ಥೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾರೆಂಬ ವಿಶ್ವಾಸ ಬಂದಿತ್ತು.
ಅಧ್ಯಕ್ಷರು ನನಗೊಂದು ಸೂಚನೆಯನ್ನು ಕೊಟ್ಟಿದ್ದರು. ಅದೆಂದರೆ, ನಾನು ಶಾಲೆಯನ್ನು ಬಿಡುವ ವಿಷಯವನ್ನು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈಗಲೇ ಹೇಳಕೂಡದು. ಯಾಕೆಂದರೆ, ನನ್ನನ್ನು ತುಂಬ ಹಚ್ಚಿಕೊಂಡ ಅವರಿಗೆ ಭಾವನೆಗಳ ಪೂರದಿಂದ ತೊಂದರೆಯಾಗಬಹುದು. ಶಾಲೆಯ ವಾತಾವರಣ ಸರಿಹೋಗದೆ ಇರಬಹುದು ಮತ್ತು ವಿಷಯ ಪಾಲಕರಿಗೆ ತಿಳಿದರೆ, ಅವರ ಗುಂಪು ನನ್ನನ್ನು ತಡೆಯಲು ಪ್ರಯತ್ನಿಸುವುದು, ಇದೆಲ್ಲ ಬೇಕಿರಲಿಲ್ಲ.
ನಾನು ಕಲಿಸಬೇಕಾದ ಪಾಠಗಳೆಲ್ಲ ಮುಗಿದಿದ್ದವು. ಕೆಲವು ತರಗತಿಗಳಿಗೆ ಹೋಗಿ ಆದ ಪಾಠಗಳ ಪುನರಾವಲೋಕನ ಮಾಡುತ್ತಿದ್ದೆ. ಅದು ಮುಗಿದು ಪರೀಕ್ಷೆಯ ದೃಷ್ಟಿಯಿಂದ ಕೆಲವು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಒಂದು ದಿನ ನಾನು ಕಚೇರಿಯ ಏನೋ ಕೆಲಸ ಮಾಡುತ್ತಿದ್ದೆ. ತರಗತಿಯ ಲೀಡರ್ ನೇಹಾ ಬಂದು, “ಸರ್, ಎಲ್ಲರೂ ನಿಮ್ಮ ತರಗತಿಗೆ ಕಾಯುತ್ತಿದ್ದಾರೆ” ಎಂದಳು. ನಾನು ನನ್ನ ಡೈರಿ ನೋಡಿ, “ನೇಹಾ, ಈಗ ನನಗೆ ನಿಮ್ಮ ತರಗತಿ ಇಲ್ಲವಲ್ಲ?” ಎಂದು ಕೇಳಿದೆ. ಆಕೆ, “ಗೊತ್ತು ಸರ್, ಆದರೆ ನೀವು ಬಂದು ಕ್ಲಾಸ್ ತೊಗೊಳ್ಳಿ ಸರ್. ಆದರೆ ಇವತ್ತು ಪಾಠ ಬೇಡ, ಮತ್ತೇನಾದರೂ ಸ್ವಾರಸ್ಯವಾದದ್ದನ್ನು ಹೇಳಿ” ಎಂದಳು. ನಾನು ಆಗಾಗ ಹಾಗೆ ಮಾಡುತ್ತಿದ್ದೆ. ಪರೀಕ್ಷೆಗೆ ಪಾಠ ಮಾಡುವುದು ಇದ್ದೇ ಇರುತ್ತದೆ. ಆದರೆ ಮಕ್ಕಳಿಗೆ ಮೌಲ್ಯಗಳ, ರಾಷ್ಟ್ರಪ್ರೇಮದ, ಸಂಬಂಧಗಳ ಬಗ್ಗೆ ತಿಳಿಸುವುದು ಯಾವಾಗ? ಅದಕ್ಕೆ ನಾನು ಅಂತಹ ತರಗತಿಗಳಿಗೆ “ಮೌಲಿಕ ತರಗತಿಗಳು” ಎಂದು ಹೆಸರಿಟ್ಟಿದ್ದೆ. ಆಕೆ ಹೇಳಿದಾಗ, ನನ್ನ ಅಂದಿನ ಕಾರ್ಯಕ್ರಮಗಳ ಪಟ್ಟಿ ನೋಡಿದೆ. ಒಂದು ತಾಸು ತರಗತಿ ತೆಗೆದುಕೊಳ್ಳಬಹುದು ಎನ್ನಿಸಿ, “ನಡೆ ಬರುತ್ತೇನೆ” ಎಂದು ಅವಳನ್ನು ಕಳುಹಿಸಿ, ಒಂದು ಕ್ಷಣ ಯೋಚಿಸಿ ನಡೆದೆ.
ಅದು ಹತ್ತನೆಯ ತರಗತಿಯ ಕ್ಲಾಸು. ಅವರು ಇನ್ನೆರಡು ತಿಂಗಳಿನ ನಂತರ ಬೋರ್ಡ ಪರೀಕ್ಷೆಗೆ ಕೂಡ್ರುವವರು. ಸಿದ್ಧತೆಯನ್ನೆಲ್ಲ ಚೆನ್ನಾಗಿ ಮಾಡಿದ್ದಾರೆ. ಈ ಮಕ್ಕಳು ಇಂದು ಎಲ್ಲರೂ ಒಟ್ಟಾಗಿ ಇಲ್ಲಿಯೇ ಕುಳಿತಿದ್ದಾರೆ. ಅವರಲ್ಲಿ ಕೆಲವರು ಬೇರೆ ಬೇರೆ ದೇಶಗಳಿಂದ ಬಂದವರು. ಈ ಮಕ್ಕಳು ನಂತರ ಎಲ್ಲೆಲ್ಲಿಗೆ ಹೋಗುತ್ತಾರೋ ತಿಳಿಯದು. ದೈವ ಅವರನ್ನು ಪ್ರಪಂಚದ ಯಾವ ಮೂಲೆಗೆ ಕರೆದೊಯ್ಯುತ್ತದೊ? ಇದನ್ನೆಲ್ಲ ವಿಚಾರಮಾಡಿ, ಒಂದು ವಿಶಿಷ್ಟವಾದ ಚಟುವಟಿಕೆ ನಡೆಸಲೆಂದೇ ಸಿದ್ಧನಾಗಿ ಬಂದಿದ್ದೆ. ಮಕ್ಕಳು ಕುತೂಹಲದಿಂದ ಸಜ್ಜಾಗಿ ಕುಳಿತಿದ್ದರು. “ಮಕ್ಕಳೇ ಇದು ಒಂದು ವಿಶೇಷ ತರಗತಿ. ನಿಮಗೆಲ್ಲ ಇಂದು ಕೆಲವು ಅದ್ಭುತಗಳನ್ನು ಪರಿಚಯ ಮಾಡಲು ಬಂದಿದ್ದೇನೆ. ಈ ಪ್ರಯೋಗವನ್ನು ನೀವು ಎಂದಿಗೂ ಮರೆಯುವುದು ಸಾಧ್ಯವಿಲ್ಲ, ಮರೆಯಬಾರದು” ಎಂದೆ. ಮಕ್ಕಳೆಲ್ಲ ಚುರುಕಾಗಿ ಮುಖದ ಮೇಲೆ ಕುತೂಹಲ, ನಗೆ ಹರಡಿಕೊಂಡು ಕುಳಿತರು. ಆಗ ನಾನು, “ಮಕ್ಕಳೇ ನೀವು ಈಗ ನಿಮ್ಮ ಪಕ್ಕದಲ್ಲಿರುವ ವಿದ್ಯಾರ್ಥಿಗೆ ಎದುರು ಬದುರಾಗುವಂತೆ ಕುರ್ಚಿಯನ್ನು ತಿರುಗಿಸಿ ಕುಳಿತುಕೊಳ್ಳಿ”. ಅವರೆಲ್ಲ ಕುರ್ಚಿಗಳನ್ನು ಸರಿಸಿಕೊಂಡು ಒಬ್ಬರಿಗೊಬ್ಬರು ಎದುರಾಗಿ ಕುಳಿತರು. ನಾನು ಮುಂದುವರೆಸಿದೆ, “ಈಗ ನಿಮ್ಮ ಎದುರಿಗಿರುವ ವಿದ್ಯಾರ್ಥಿಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿ. ಮುಖದ ಒಂದೊಂದೇ ಭಾಗವನ್ನು ನೋಡುತ್ತ ಬನ್ನಿ. ತಲೆಗೂದಲು, ಅದರ ಬಣ್ಣ, ಹಾರಾಡುವ ಎಳೆಗಳು, ಕಣ್ಣಿನ ಹುಬ್ಬುಗಳು, ಕಣ್ಣಿನ ಹೊಳಪು, ಅದರ ಬಣ್ಣ, ಎವೆಗಳು, ಮೂಗಿನ ಬಾಗು, ಕಿವಿಗಳು, ಆಭರಣದ ಅಲಂಕಾರ, ತುಟಿಗಳು, ಗದ್ದ, ಮುಖದ ಮೇಲಿದ್ದ ಗಾಯದ, ಮೊಡಮೆಯ ಕಲೆಗಳು, ಹೀಗೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ನೋಡುತ್ತ ಬನ್ನಿ,”
ಅವರಿಗೆ ಹೀಗೆ ಏಕೆ ಮಾಡುತ್ತಿದ್ದೇವೆ ಎಂಬುದು ತಿಳಿಯದು. ಕೆಲವರಿಗೆ ಎದುರು ಕುಳಿತವರು ಹೀಗೆ ಒಂದೇ ಸಮನೆ ದಿಟ್ಟಿಸಿ ಮುಖ ನೋಡುತ್ತಿದ್ದದ್ದು ಮೊದಮೊದಲು ಮುಜುಗರವೆನ್ನಿಸಿರಬಹುದು. ಅವರೂ ಮತ್ತೊಬ್ಬರ ಮುಖವನ್ನು ಅಷ್ಟೇ ತೀವ್ರತೆಯಿಂದ ನೋಡುತ್ತಿದ್ದುದರಿಂದ, ಮುಂದೆ ಸಂತೋಷವಾಗಿ ಭಾಗವಹಿಸಿದರು. ಇದು ಒಂದು ಆರೇಳು ನಿಮಿಷ ನಡೆಯಿತು.
ಆನಂತರ ಅವರನ್ನು ಮೊದಲಿನಂತೆ ಕುರ್ಚಿಗಳನ್ನು ಸರಿಸಿಕೊಂಡು ಕುಳಿತುಕೊಳ್ಳಲು ಹೇಳಿದೆ. “ಮಕ್ಕಳೇ ಇದೀಗ ನಿಮ್ಮ ಸ್ನೇಹಿತರ ಮುಖವನ್ನು ಸೂಕ್ಷ್ಮವಾಗಿ ನೋಡಿದಿರಿ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಇಂಥ ಮುಖ ನಿಮಗೆ ಮುಂದೆ ಎಂದೆಯೂ ದೊರೆಯುವುದು ಸಾಧ್ಯವಿಲ್ಲ. ಪ್ರಪಂಚ ಉದಯವಾದಾಗಿನಿಂದ ಇಲ್ಲಿಯವರೆಗೆ, ಇಂಥದೊಂದು ಮುಖ ಮೊದಲು ಸೃಷ್ಟಿಯಾಗಿಲ್ಲ, ಇಂದು ಕೂಡ ಇಂಥ ಮುಖ ಬೇರೆಲ್ಲೂ ಇಲ್ಲ, ಪ್ರಪಂಚದಲ್ಲಿ ಮುಂದೆಯೂ ಇರುವುದಿಲ್ಲ. ಇದೊಂದು ಜಗತ್ತಿನ ಅದ್ಭುತ. ಹೇಗೆ ತಾಜಮಹಲ, ಚೀನಾ ಗೋಡೆ, ವಾಲುತ್ತಿರುವ ಪೀಸಾ ಗೋಪುರಗಳು ಪ್ರಪಂಚದ ಅದ್ಭುತಗಳೆಂದು ಒಪ್ಪಿತವಾಗಿವೆಯೋ, ಹಾಗೆಯೇ ಈ ಮುಖ ಕೂಡ ಒಂದು ಅದ್ಭುತ. ಅಂಥ ಅದ್ಭುತವನ್ನು ಅತ್ಯಂತ ಹತ್ತಿರದಿಂದ ನೋಡುವ ಅವಕಾಶ ನಿಮಗೆ ದೊರೆತಿದೆ” ಎಂದೆ. ಮಕ್ಕಳೆಲ್ಲ ಮತ್ತೆ ಮುಖ, ಮುಖ ನೋಡಿಕೊಂಡರು.
ನಾನು ಮತ್ತೆ ಹೇಳಿದೆ, “ಮಕ್ಕಳೇ ಈಗ ನಿಮ್ಮ ಹಸ್ತಗಳನ್ನು ಸರಿಯಾಗಿ ನೋಡಿಕೊಳ್ಳಿ. ಅಂಗೈಯಲ್ಲಿದ್ದ ಗೆರೆಗಳನ್ನು ನೋಡಿ. ಅವುಗಳನ್ನು ನೋಡಿ ಕೆಲವರು ಭವಿಷ್ಯ ಹೇಳುತ್ತಾರೆ. ಆ ಗೆರೆಗಳೆಲ್ಲ ಕೈ ಮಡಿಚಲು ಅನುಕೂಲವಾಗುವಂತೆ ನಿರ್ಮಾಣವಾಗಿವೆ. ಅವು ನಿಮ್ಮ ಪರಿಶ್ರಮದ ಪ್ರಮಾಣಪತ್ರಗಳು. ಈಗ ನಿಧಾನವಾಗಿ ನಿಮ್ಮ ಬೆರಳಿನ ತುದಿಗಳನ್ನು ಗಮನಿಸಿ. ಅವುಗಳ ಮೇಲಿದ್ದ ಗೆರೆಗಳನ್ನು ದಿಟ್ಟಿಸಿ ನೋಡಿ. ಅವುಗಳಲ್ಲಿ ಕೆಲವರು ಶಂಖ, ಚಕ್ರ ಎಂದು ಕಾಣುತ್ತಾರೆ. ಮತ್ತೆ ಈ ಗೆರೆಗಳು ಅದ್ಭುತ. ಪ್ರಪಂಚ ಎಂದೆಂದೂ ಕಂಡಿರದ ಬೆರಳಿನ ಗೆರೆಗಳು ಅವು. ಇಂದು ಪ್ರಪಂಚದಲ್ಲಿ ಎಂಟುನೂರು ಕೋಟಿ ಮನುಷ್ಯರಿದ್ದಾರೆ. ನಿಮ್ಮ ಬೆರಳಿನ ತುದಿಯ ಗೆರೆಗಳು ಪ್ರಪಂಚದ ಯಾರ ಬೆರಳಿನ ತುದಿಯ ಗೆರೆಗಳನ್ನು ಹೋಲುವುದಿಲ್ಲವೆಂದರೆ ಆಶ್ಚರ್ಯವಾಗುವುದಿಲ್ಲವೆ? ನಮ್ಮ ಸಹಿಯನ್ನು ಮೋಸದಿಂದ ಬೇರೆಯವರು ಅನುಕರಿಸಬಹುದು, ಆದರೆ ಬೆರಳಿನ ತುದಿಯ ಗೆರೆಗಳನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಅದಕ್ಕೇ ಕೆಲವು ಪ್ರಮುಖ ದಾಖಲೆಗಳನ್ನು ಮಾಡುವಾಗ ನಿಮ್ಮ ಹೆಬ್ಬೆರಳ ಗುರುತನ್ನು ತೆಗೆದುಕೊಳ್ಳುತ್ತಾರೆ. ಮೇಲ್ನೋಟಕ್ಕೆ ಎಲ್ಲವೂ ಒಂದೇ ತರಹ ಎನ್ನಿಸಿದರೂ ಅವೆಲ್ಲ ಬೇರೆಯೇ! ಇಂಥ ಅದ್ವಿತೀಯವಾದ, ವಿಶೇಷವಾದ ಅದ್ಭುತವನ್ನು ನಿಮಗಾಗಿ ಕೊಟ್ಟ ಭಗವಂತನಿಗೆ ನೀವು ಋಣಿಯಾಗಿರಬೇಕಲ್ಲವೇ?”. ತರಗತಿಯಲ್ಲಿ ಸಂಪೂರ್ಣ ಮೌನ. ಮಕ್ಕಳು ತಾವೊಂದು ಅದ್ಭುತ, ತಮ್ಮ ಹಸ್ತರೇಖೆಗಳು ಮತ್ತೊಂದು ಅದ್ಭುತ ಎಂದು ಗಮನಿಸುವುದರಲ್ಲಿ ತಲ್ಲೀನರಾಗಿದ್ದರು.
ಆಗ ‘ಸರ್’ ಎಂಬ ಧ್ವನಿ ಮೌನವನ್ನು ಸೀಳಿತು. ತಿರುಗಿ ನೋಡಿದರೆ ಅವನು ಆನಂದ. ಅವನು ಎಂದೂ ತರಗತಿಯಲ್ಲಿ ಮಾತನಾಡಿದ್ದೇ ಇಲ್ಲ. ಬಹಳ ನಾಚಿಕೆಯ ಹುಡುಗ. ‘ಸರ್’ ಎಂದು ಮುಂದೆ ಬಂದವನೇ ದೊಪ್ಪನೆ ನನ್ನ ಕಾಲ ಮೇಲೆ ಬಿದ್ದ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಆತ ಎದ್ದು ನಿಂತು, ನನ್ನನ್ನು ಅಪ್ಪಿಕೊಂಡು ಬಿಟ್ಟ. ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ! “ಯಾಕಪ್ಪ?” ಎಂದು ಕೇಳಿದೆ. ಅವನ ಕಣ್ಣೀರು ಒರೆಸಿದೆ. “ದು:ಖವಿಲ್ಲ ಸರ್, ಅತ್ಯಂತ ಸಂತೋಷ ಸರ್. ನಾನೊಬ್ಬ ವಿಶೇಷ ವ್ಯಕ್ತಿ ಎಂಬುದೇ ತಿಳಿದಿರಲಿಲ್ಲ. ನನ್ನ ಕೈ ಬಗ್ಗೆ ನನಗೆ ಅಸಹ್ಯವಿತ್ತು ಸರ್, ಈ ತಿರುಚಿದ ಕೈ, ಅದಕ್ಕೆ ನೇತಾಡುವ ಈ ಆರನೇ ಬೆರಳು ನನಗೆ ಹೇಸಿಗೆ ತರುತ್ತಿತ್ತು. ಈಗ ನನಗರ್ಥವಾಯಿತು ಸರ್, ಇದು ಪ್ರಪಂಚದ ಅದ್ಭುತ. ಭಗವಂತ ನನಗಾಗಿ ಯಾವುದೋ ಪ್ರಯೋಜನಕ್ಕಾಗಿ ಸೃಷ್ಟಿ ಮಾಡಿದ್ದಾನೆ. ಸರ್ ಉಳಿದವರಿಗೆಲ್ಲ ಐದೇ ಬೆರಳಾದರೆ ನನಗೆ ಆರಿದೆ ಸರ್. ಎಲ್ಲರೂ ಪ್ರಪಂಚದ ಅದ್ಭುತವಾದರೆ ನಾನು ವಿಶೇಷ ಅದ್ಭುತ ಸರ್” ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ನಡೆದ. ಆ ಸಂದರ್ಭವನ್ನು ನಾನೆಂದಿಗೂ ಮರೆಯಲಾರೆ.
ಇತ್ತೀಚಿಗೆ ಆನಂದ ಫೋನ್ ಮಾಡಿದ್ದ. ಆ ಕರೆ ಮುಂಬೈನಿಂದ ಬಂದದ್ದು “ಸರ್, ನಾನು ಆನಂದ” ಎಂಬ ಧ್ವನಿ. “ಯಾವ ಆನಂದ?” ಎಂದು ಕೇಳಿದೆ. ಆತ, “ಸರ್ ನಾನು ಶಾಲೆಯಲ್ಲಿ ಓದುತ್ತಿದ್ದಾಗ ನೀವು ಪ್ರಿನ್ಸಿಪಾಲರಾಗಿದ್ದಿರಿ. ನಾನು ಹಾಗೆ ಹೇಳಿದರೆ ನಿಮಗೆ ನೆನಪಾಗಲಾರದು. ನಾನು ಪ್ರಪಂಚದ ವಿಶೇಷ ಅದ್ಭುತ ಆನಂದ ಸರ್. ಆರು ಬೆರಳಿನ ಆನಂದ” ಎಂದು ಜೋರಾಗಿ ನಕ್ಕ. ತಕ್ಷಣ ಮಬ್ಬು ಸರಿದು ಇಪ್ಪತೈದು ವರ್ಷಗಳ ಹಿಂದೆ ನಡೆದುಹೋದ ಘಟನೆ ಈಗಷ್ಟೇ ನಡೆದಂತೆ ಮೈತುಂಬಿ ಮನದಲ್ಲಿ ಓಡಾಡಿತು. ಇನ್ನೊಂದು ವಿಷಯ, ಆನಂದ ಈಗ ಬಹುದೊಡ್ಡ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾನೆ.
ನಾವೆಲ್ಲ ಅದ್ಭುತಗಳು, ಸಣ್ಣವರಲ್ಲ. ನಮ್ಮನ್ನು ಭಗವಂತ ವಿಶೇಷವಾಗಿ ಪ್ರೀತಿಯಿಂದ ನಿರ್ಮಿಸಿದ್ದಾನೆ. ನಾವು ನಿರ್ಮಾಣವಾದದ್ದೇ ಅದ್ಭುತವಾದ ಸಾಧನೆಗಳನ್ನು ಮಾಡಲು. ಹಾಗೆ ಮಾಡದೆ ಹೋದರೆ ಅವನ ಆಶಯಕ್ಕೆ ನಾವು ನಿರಾಸೆಯನ್ನು ತಂದಂತೆ ಅಲ್ಲವೇ?