ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಂಗಳೂರಿಗೆ ಸ್ವಾಗತ. ನಿಮ್ಮ ಭೇಟಿ ವಿಕಾಸ ದರ್ಶನಕ್ಕೋ, ವಿನಾಶ ದರ್ಶನಕ್ಕೋ? ನಿಮ್ಮ ಇಂದಿನ ಭಾಷಣದಲ್ಲಿ ಈ ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿನಯಪೂರ್ವಕ ಮನವಿ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಕ್ಷಿಣ ಕನ್ನಡದ ಉದ್ಯಮಶೀಲ ಹಿರಿಯರು ಸಿಂಡಿಕೇಟ್, ಕಾರ್ಪೋರೇಷನ್, ವಿಜಯಾ, ಕೆನರಾ ಮತ್ತು ಕರ್ನಾಟಕ ಹೀಗೆ ಐದು ಬ್ಯಾಂಕ್ ಗಳನ್ನು ಹುಟ್ಟುಹಾಕಿದ್ದರು. ನೀವು ಇವುಗಳಲ್ಲಿ ಮೂರು ಬ್ಯಾಂಕುಗಳ ನಾಮಾವಶೇಷ ಮಾಡಿದ್ದೀರಿ. ನವಮಂಗಳೂರು ಬಂದರು ಮಾಜಿ ಪ್ರಧಾನಿ ಇಂದಿರಾಗಾಂಧಿ ಕೊಡುಗೆ . ಇದು ಸಂಸದ ಯು.ಶ್ರೀನಿವಾಸ ಮಲ್ಯ ಪ್ರಯತ್ನದ ಫಲ. ನವಮಂಗಳೂರು ಬಂದರನ್ನು ಉದ್ಯಮಿ ಮಿತ್ರ ಅದಾನಿಯವರಿಗೆ ಹಂತಹಂತವಾಗಿ ಮಾರುತ್ತಿರುವುದು ಪ್ರಧಾನಿ ಮೋದಿ. ಬಜ್ಪೆ ವಿಮಾನ ನಿಲ್ದಾಣ, ಎನ್ ಎಂಪಿಟಿ, ಎನ್ ಎಚ್-66, ರೀಜನಲ್ ಎಂಜನಿಯರಿಂಗ್ ಕಾಲೇಜ್, ಎಂಸಿಎಫ್- ಇವೆಲ್ಲ ಕಾಂಗ್ರೆಸ್ ಸಂಸದರ ಕೊಡುಗೆ. ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ಕೊಡುಗೆ ಏನು? ಮಳೆಯಲ್ಲಿ ಮುಳುಗುವ ಮಂಗಳೂರು? ಕೋಮುದ್ವೇಷದ ಬೆಂಕಿಯಲ್ಲಿ ಬೇಯುತ್ತಿರುವ ಮಂಗಳೂರೇ ಎಂದು ಪ್ರಶ್ನಿಸಿದ್ದಾರೆ.