ಹುಬ್ಬಳ್ಳಿ: ರಾಷ್ಡ್ರೀಯ ಯುವ ಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹುಬ್ಬಳ್ಳಿ ಜನರು ಭವ್ಯವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಗೋಕುಲ ರಸ್ತೆ ಮಾರ್ಗವಾಗಿ ರೈಲ್ವೆ ಮೈದಾನಕ್ಕೆ ತೆರಳುವ ವೇಳೆ ಗೋಕುಲ ರಸ್ತೆ ಇಕ್ಕೆಲಗಳಲ್ಲಿ ಮೋದಿಯವರಿಗೆ ಜೈಕಾರ ಹಾಕಿದರು.
ಮಾರ್ಗದುದ್ದಕ್ಕೂ ಮೋದಿ ..ಮೋದಿ .. ಎಂದು ಘೋಷಣೆ ಕೂಗಿದರು. ಕೆಲ ಕಡೆ ಪುಷ್ಪವೃಷ್ಟಿ ಮಾಡಲು ಮುಂದಾದ ಸಾರ್ವಜನಿಕರನ್ನು ಪೊಲೀಸರು ತಡೆದರು. ಮಧ್ಯಾಹ್ನ 1 ಗಂಟೆಯಿಂದಲೇ ಪ್ರಧಾನಿ ಮೋದಿ ಅವರ ಅಗಮನಕ್ಕೆ ಕಾದಿದ್ದ ಜನರು, ಮೋದಿ ಅವರ ಬೆಂಗಾವಲು ವಾಹನ ಬರುತ್ತಿದ್ದಂತೆಯೇ ಘೋಷಣೆ ಕೂಗಲು ಆರಂಭಿಸಿದರು. ಬಳಿಕ ಪ್ರಧಾನಿ ಅವರಿದ್ದ ಕಾರು ಬರುತ್ತಿದ್ದಂತೆಯೇ ಜಯಘೋಷ ಹೆಚ್ಚಾದವು. ಜನರನ್ನು ಕಂಡು ಪುಳಕಿತರಾದ ಪ್ರಧಾನಿ ಕಾರಿನಿಂದ ಹೊರಗಡೆ ಮೆಟ್ಟಿಲು ಮೇಲೆ ನಿಂತು ಜನರತ್ತ ಕೈ ಬೀಸುತ್ತ ಸಾಗಿದರು. ಮೋದಿ ಅವರನ್ನು ನೋಡಿದ ಜನ ಸಂಭ್ರಮಿಸಿದರು. ಪ್ರಧಾನಿ ಅವರ ಕಾರು ಮುಂದೆ ಸಾಗುತ್ತಿದ್ದಂತೆಯೇ ಜನರೂ ರಸ್ತೆ ಪಕ್ಕದ ಫುಟ್ ಪಾತ್ ಗಳಲ್ಲಿ ಓಡಿ ಹೋಗಿ ಮತ್ತೆ ಮತ್ತೆ ಮೋದಿ ಅವರನ್ನು ಕಂಡು ಸಂಭ್ರಮಿಸಿದರು. ಅಭಿಮಾನಿಗಳೆಲ್ಲರ ಕೈಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಭಿನ್ನ, ವಿಭಿನ್ನ ಪೋಸ್ಟರ್ ಗಳು ಗಮನ ಸೆಳೆದವು.ಕೆಲವರು ಪುಟಾಣಿ ಮಕ್ಕಳ ಕೈಯಲ್ಲಿ ಮೋದಿ ಪೋಸ್ಟರ್ ಕೊಟ್ಟು ತಲೆಯ ಮೇಲೆ ಹೊತ್ತುಕೊಂಡು ನಿಂತು ಪ್ರಧಾನಿ ಗಮನ ಸೆಳೆಯುವ ಪ್ರಯತ್ನ ಮಾಡಿದರು.