ಹುಬ್ಬಳ್ಳಿ: ಈಗ ಧಾರವಾಡ ಆಕಾಶವಾಣಿ ಕೇಂದ್ರದಿಂದ ಬೆಳಿಗ್ಗೆ ಪ್ರಸಾರವಾಗುವ `ಪ್ರದೇಶ ಸಮಾಚಾರ’ ಆಕಾಶವಾಣಿ ವಾರ್ತೆಯನ್ನು ಬೆಂಗಳೂರು ಕೇಂದ್ರಕ್ಕೆ ಶಿಫ್ಟ್ ಮಾಡುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು ಎಂದು ಈ ಭಾಗದ ಸಾಹಿತಿಗಳು, ಕಲಾವಿದರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಮಾಡಿರುವ ಅವರು, ಕಳೆದ ೬೦ಕ್ಕೂ ಹೆಚ್ಚು ವರ್ಷಗಳಿಂದ ಬೆಳಿಗ್ಗೆ ೭.೦೫ ನಿಮಿಷಕ್ಕೆ ಧಾರವಾಡ ಆಕಾಶವಾಣಿ, ಸುದ್ದಿ ವಿಭಾಗದಿಂದ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ ರಾಷ್ಟ್ರ, ರಾಜ್ಯ ಮತ್ತು ಉತ್ತರ ಕರ್ನಾಟಕ ಭಾಗದ ಧ್ವನಿಯಾಗಿ ಕೆಲಸ ಮಾಡಿದೆ ಎಂದಿದ್ದಾರೆ.
ಧಾರವಾಡ ನಿಲಯದಿಂದ ಪ್ರಸಾರವಾಗುತ್ತಿದ್ದ ಎಫ್‌ಎಂ ಸುದ್ದಿಗಳನ್ನು ಈ ಹಿಂದೆ, ನಿಲ್ಲಿಸಲಾಗಿದ್ದು, ಇದೀಗ ಬೆಳಿಗ್ಗೆ ೭.೦೫ ನಿಮಿಷಕ್ಕೆ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ ವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಈ ಭಾಗದ ಧ್ವನಿಯಾಗಿರುವ, ಈ ಭಾಗದ ಸುದ್ದಿಗಳಿಗೆ ಪ್ರಾತಿನಿಧ್ಯ ದೊರಕುವ ನಿಟ್ಟಿನಲ್ಲಿ ಬೆಳಗಿನ ಪ್ರದೇಶ ಸಮಾಚಾರ ಇಲ್ಲಿಯೇ ಮುಂದುವರಿಯುವುದು ಅಗತ್ಯವಾಗಿದೆ ಎಂದು ಆಗ್ರಹಿಸಿದ್ದಾರೆ.
ಧಾರವಾಡ ಆಕಾಶವಾಣಿ ಹಲವು ವಿಧಗಳಲ್ಲಿ ಈ ಭಾಗದ ಅಸ್ಮಿತೆಯಾಗಿ, ಹಲವು ಜಾನಪದ, ಶಾಸ್ತ್ರೀಯ ಸಂಗೀತ, ನಾಟಕ ಕಲಾವಿದರು ಸೇರಿದಂತೆ ಹಲವರಿಗೆ ಒಂದು ಒಳ್ಳೆಯ ವೇದಿಕೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದ ಬಗ್ಗೆ ಅಪಾರ ಕಾಳಜಿ, ಕಳಕಳಿ ಹೊಂದಿರುವ ತಾವು ಪ್ರದೇಶ ಸಮಾಚಾರ ಸ್ಥಳಾಂತರ ಪ್ರಯತ್ನವನ್ನು ತಡೆಯಬೇಕು. ಬೆಳಗಿನ ಸಮಯದಲ್ಲಿ ಧಾರವಾಡ ಆಕಾಶವಾಣಿಯಿಂದ ಪ್ರಸಾರವಾಗುವದನ್ನು ಇಲ್ಲಿಯೇ ಮುಂದುವರಿಸಲು ಸಂಬಂಧಿಸಿದ ಸಚಿವರು, ಮತ್ತು ಅಧಿಕಾರಿಗಳಿಗೆ ಹಕ್ಕೊತ್ತಾಯ ಮಂಡಿಸಬೇಕು ಎಂದು ಮನವಿ ಮಾಡಿದ್ದಾರೆ.