ಯಲಬುರ್ಗಾ: ೭೫ನೇ ಸ್ವಾತಂತ್ರ್ಯ ಮಹೋತ್ಸವ ಈ ಶುಭ ಸಂದರ್ಭದಲ್ಲಿ ಆ. ೧೩ರಿಂದ ಆ. ೧೫ರ ವರೆಗೆ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಸಂಕಲ್ಪ ಮಾಡಲಾಗಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.
ಪಟ್ಟಣದ ಕಂದಾಯ ಭವನದಲ್ಲಿ ಹರ್ ಘರ್ ತಿರಂಗಾ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷದ ಈ ಹೊತ್ತಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ೪೩,೫೦೦ ಒಟ್ಟು ಮನೆಯಲ್ಲಿ ಧ್ವಜ ಹಾರಿಸಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಉತ್ತಮ ಸ್ಪಂದನೆಯೂ ದೊರೆಯುತ್ತಿದೆ ಎಂದರು.