ಹುಬ್ಬಳ್ಳಿ : ಹಕ್ಕುಗಳ ಬಗ್ಗೆ ತಿಳಿವಳಿಕೆ ಹೊಂದಿರುವಷ್ಟು ನಾಗರಿಕ ಕರ್ತವ್ಯಗಳ ಬಗ್ಗೆಯೂ ಹೊಂದಿರಬೇಕು. ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರಜಾಪ್ರಭುತ್ವದ ಕಾವಲುಗಾರನಾಗಿರಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ನಗರದಲ್ಲಿ ಕೆ.ಎಲ್.ಇ ತಾಂತ್ರಿಕ ವಿವಿಯಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಚುನಾವಣಾ ಸುಧಾರಣಾ ಕ್ರಮಗಳ ಕುರಿತ ಸಂವಾದಲ್ಲಿ ಮಾತನಾಡಿದರು. ಇಡೀ ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಜಗತ್ತಿನ ಹಲವು ದೇಶಗಳು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಂಡಾಡಿವೆ. ಈ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು. ಹಾಗೆಯೇ ಅದರ ರಕ್ಷಣೆಗೆ ಕಾವಲುಗಾರರಾಗಬೇಕು ಎಂದರು.
ನನ್ನ ಮತ ಮಾರಾಟಕ್ಕಿಲ್ಲ ಎಂಬ ದೃಢ ನಿಲುವು ತಾಳಬೇಕು. ಆಸೆ, ಅಮಿಷಗಳಿಗೆ ಬಲಿಯಾಗಬಾರದು. ತಪ್ಪದೇ ಮತದಾನ ಮಾಡಬೇಕು. ಅಂದಾಗ ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಾಧ್ಯವಿದೆ ಎಂದು ಹೇಳಿದರು. ಪಕ್ಷಾಂತರ ನಿಷೇಧ ಕಾಯ್ದೆ ಬಲಿಷ್ಠಗೊಳಿಸಲು ಏನು ಕ್ರಮಗಳನ್ನು ಕೈಗೊಳ್ಳಬೇಕು, ಮತದಾರರ ಹಕ್ಕುಗಳ ರಕ್ಷಣೆ ಸೇರಿದಂತೆ ಹತ್ತಾರು ಸಲಹೆಗಳನ್ನು ಲೋಕಸಭಾಧ್ಯಕ್ಷರಿಗೆ ನೀಡಲಾಗಿದೆ. ಈ ರೀತಿಯ ಸಂವಾದ ಕಾರ್ಯಕ್ರಮಗಳಲ್ಲಿ ಹೊರ ಹೊಮ್ಮಿದ ಸಲಹೆಗಳಲ್ಲಿ ಆಯ್ದ ಕೆಲವನ್ನು ಕಳಿಸಲಾಗುತ್ತದೆ ಎಂದು ಹೇಳಿದರು.
ಸಂವಿಧಾನ ಗೌರವಿಸಿ : ಸಂವಿಧಾನದಿಂದಲೇ ಎಲ್ಲವೂ ನಮಗೆ ದೊರಕಿರುವುದು. ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು. ಅದರಲ್ಲಿ ಪ್ರತಿಪಾದಿಸಿದ ನಾಗರಿಕ ಕರ್ತವ್ಯಗಳನ್ನು ಹೊಣೆಗಾರಿಕೆಯಿಂದ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
21 ವರ್ಷದಿಂದ 18 ವರ್ಷದವರಿಗೆ ಮತದಾನ ಹಕ್ಕು ಲಭಿಸಿದೆ. ಪ್ರಜ್ಞಾವಂತಿಕೆಯಿಂದ ಯುವ ಸಮೂಹ ಹಕ್ಕು ಚಲಾಯಿಸಬೇಕು. ಆಧಾರ್ ಕಾರ್ಡಿಗೆ ವೋಟರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ನಡೆದಿದೆ. ಎಲ್ಲರೂ ತಪ್ಪದೇ ಲಿಂಕ್ ಮಾಡಿಸಬೇಕು ಎಂದು ಹೇಳಿದರು.