ಚಿಕ್ಕಮಗಳೂರು: ದಾಖಲೆ ಇಲ್ಲದೆ ಪಿಕಪ್‌ನಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತರೀಕೆರೆ ಪಟ್ಟಣದ ಚೆಕ್‌ಪೋಸ್ಟ್‌ನಲ್ಲಿ ಬರೋಬ್ಬರಿ ಮೂರು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಕಪ್ ವಾಹನದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ವೇಳೆ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ತರೀಕೆರೆಯಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಪಿಕಪ್ ವಾಹನವನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಚಿನ್ನದ ಅಕ್ರಮ ಸಾಗಾಟ ಕಂಡುಬಂದಿದೆ. ಕಪ್ ವಾಹನದಲ್ಲಿ ಚಿನ್ನದ ಬಿಸ್ಕೆಟ್ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು ಚಿನ್ನಕ್ಕೆ ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಕ್ರಮ ಸಾಗಾಟ ಹಿನ್ನೆಲೆ ಹಲವು ಅನುಮಾನ ಮೂಡಿಸಿದ್ದರಿಂದ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 9 ಕೆಜಿ 300 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ಬಾಕ್ಸ್‌ನಲ್ಲಿ ಚಿನ್ನವನ್ನು ಇಬ್ಬರು ವಾಹನದಲ್ಲಿ ತರುತ್ತಿದ್ದರು. ಪಿಕಪ್ ವಾಹನ ಸವಾರ ಸೇರಿ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಲಾಗುತ್ತಿದೆ.