ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ದೇಣಿಗೆ

ಸರ್ಕಾರಿ ನೌಕರರು
Advertisement

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ರಾಜ್ಯ ಸರ್ಕಾರದ “ಪುಣ್ಯಕೋಟಿ ದತ್ತು ಯೋಜನೆ”ಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರಿತರ ಸಂಸ್ಥೆಗಳ ನೌಕರರು ದೇಣಿಗೆ ನೀಡಲು ಸಮ್ಮತಿಸಿರುವ ಕುರಿತು ಸಮ್ಮತಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.
ಮುಖ್ಯಮಂತ್ರಿಯವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ಸ್ವ-ಇಚ್ಛೆಯಿಂದ ದೇಣಿಗೆ ನೀಡಲು ಮುಂದಾಗಿದ್ದು, ಗ್ರೂಪ್ ಎ ಅಧಿಕಾರಿಗಳು 11,000 ರೂ., ಗ್ರೂಪ್ ಬಿ ಅಧಿಕಾರಿಗಳು 4000 ರೂ. ಹಾಗೂ ಸಿ ವೃಂದದ ನೌಕರರು 400 ರೂ. ದೇಣಿಗೆಯನ್ನು ಒಂದು ಬಾರಿಗೆ ಪಾವತಿಸಲು ಸಮ್ಮತಿಸಿದ್ದಾರೆ. ಇದನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಕಟಾಯಿಸುವಂತೆ ಕೋರಿದ್ದಾರೆ. ಈ ಮೊತ್ತವು ಸುಮಾರು 80 ರಿಂದ 100 ಕೋಟಿ ರೂ. ಗಳಾಗಲಿದೆ ಎಂದು ಅಂದಾಜಿಸಲಾಗಿದೆ.
ನೌಕರರ ಸಂಘದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಗೋಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುದಿ ಗೋವುಗಳು ಆಶ್ರಯ ಪಡೆದಿವೆ. ಇವುಗಳ ಸಮರ್ಪಕ ಪಾಲನೆ ಪೋಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ಪುಣ್ಯದ ಕೆಲಸದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.