ಬೆಳಗಾವಿ: ಸತೀಶ ಜಾರಕಿಹೊಳಿ ಅವರ ವಿರುದ್ಧ ಪಿತೂರಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೋಮವಾರ ಜಾರಕಿಹೊಳಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಸತೀಶ್ ಜಾರಕಿಹೊಳಿ ಅವರು ನೀಡಿದ್ದ ಹಿಂದೂ ಧರ್ಮದ ಕುರಿತಾದ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಅಭಿಮಾನಿಗಳು ತಮ್ಮ ಶಕ್ತಿ ಪ್ರದರ್ಶನದ ಮೂಲಕ ಎದುರೇಟು ನೀಡಿದರು. ಅಲ್ಲದೇ, ವಿನಾಕಾರಣ ತಮ್ಮ ನಾಯಕರ ವಿರುದ್ಧ ಹೇಳಿಕೆ ನೀಡಿದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ಎಂಬ ಖಡಕ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಸೋಮವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆಂಬಲಿಗರು, ವಿವಿಧ ದಲಿತ ಸಂಘಟನೆಗಳು ಶಕ್ತಿ ಪ್ರದರ್ಶನ ನಡೆಸಿದವು. ಪ್ರತಿಭಟನಾ ರ‍್ಯಾಲಿಯಲ್ಲಿ ಕೇಸರಿ, ನೀಲಿ, ಕನ್ನಡ ಬಾವುಟ ಬಣ್ಣದ ಶಾಲು ಧರಿಸಿದ್ದ ಸಹಸ್ರಾರು ಅಭಿಮಾನಿಗಳು ಭಾಗಿಯಾಗಿದ್ದರು.