ಧಾರವಾಡ: ಪಿಎಸ್ಐ ಪರೀಕ್ಷೆ ಅಕ್ರಮ ತನಿಖೆ ಬಾಕಿ ಇರುವಾಗಲೇ ಮತ್ತೊಂದೆಡೆ ನೇಮಕಾತಿಗೆ ಮುಂದಾದ ಸರಕಾರದ ನಡೆ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ಶುಕ್ರವಾರ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದರು.ಈಗಾಗಲೇ ೫೪೫ ಪೋಸ್ಟ್ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅದರ ತನಿಖೆ ನಡೆಯುತ್ತಿದೆ. ಆದರೆ, ಈ ಮಧ್ಯೆ ೪೦೨ ಪಿಎಸ್ಐ ಪರೀಕ್ಷೆ ಗೆ ಯಾಕೆ ಕರೆಯಬೇಕಿತ್ತು. ಇದು ಸರಕಾರದ ದ್ವಂದ್ವ ನಿಲುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿಯ ಶ್ರೀನಗರ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಕೆಸಿಡಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.