ಕುಷ್ಟಗಿ (ಕೊಪ್ಪಳ ಜಿಲ್ಲೆ): ಪಿಎಸೈ ಸೇರಿದಂತೆ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಂತವರಿಗೆ ಆದಷ್ಟು ಬೇಗನೆ ಕಟ್ಟುನಿಟ್ಟಿನ ಶಿಕ್ಷೆ ಆಗಬೇಕಾಗಿದೆ. ಅಂದಾಗ ಮಾತ್ರ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಶಂಕರ ಮಹಾದೇವ ಬಿದರಿ ಒತ್ತಾಯಿಸಿದರು.
ಪಟ್ಟಣದಲ್ಲಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನ ತಾಲೂಕು ಘಟಕ, ತಾಲೂಕ ಯುವ ಘಟಕ,ನಗರ ಘಟಕ, ಮಹಿಳಾ ಘಟಕ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಬಳಿಕ ಮಾಧ್ಯಮದರರೊಂದಿಗೆ ಮಾತನಾಡಿದ ಅವರು, ನೇಮಕಾತಿ ವಿಚಾರದಲ್ಲಿ ಯಾರು ತಪ್ಪಿತಸ್ಥರು ಆಗಿರುತ್ತಾರೆ, ಅಂತವರಿಗೆ ಆದಷ್ಟು ಬೇಗನೆ ಶಿಕ್ಷೆಗೆ ಒಳಪಡಿಸಬೇಕಾಗಿದೆ. ನೇಮಕಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಕಪ್ಪುಚುಕ್ಕೆಯಾಗಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ದುರದೃಷ್ಟಕರ ಸಂಗತಿ. ಸ್ವಾರ್ಥಿಗಳು ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದಾರೆ. ಅವರಿಗೆ ಜನರ ಹಿತಾಸಕ್ತಿ ಬೇಕಾಗಿಲ್ಲ. ದುಡ್ಡು ಮಾಡುವುದೇ ಒಂದೇ ದಾರಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಜನರಿಗೆ ಒಳ್ಳೆಯದನ್ನು ಮಾಡಬೇಕು ಮತ್ತು ಉತ್ತಮ ಆಡಳಿತ ನೀಡಬೇಕೆಂಬ ಉದ್ದೇಶ ಇಟ್ಟುಕೊಂಡಿಲ್ಲ. ಬದಲಿಗೆ ಇಂತಹ ನೇಮಕಾತಿ ವಿಚಾರದಲ್ಲಿ ಅಕ್ರಮ ಹೆಸರು ಅದರ ಮೂಲಕ ಹಣ ಮಾಡಲು ಹೊರಟಿದ್ದಾರೆ. ಆಡಳಿತ ನಡೆಸುತ್ತಿರುವವರಿಗೆ ಜನರ ಹಿತಾಸಕ್ತಿ ಬೇಕಾಗಿಲ್ಲ. ಬದಲಿಗೆ ಹಣ ಮಾಡುವ ವಿಚಾರದಿಂದಾಗಿ ಇಂತಹ ನೇಮಕಾತಿ ವಿಚಾರದಲ್ಲಿ ಅಕ್ರಮಗಳು ನಡೆಯುತ್ತಿವೆ ಮನಸ್ಸಿಗೆ ಬಹಳ ಖೇದ ಎನಿಸುತ್ತದೆ ಎಂದರು.