ನರೇಗಲ್ಲ: ರಾಜ್ಯದಲ್ಲಿ ಅಶಾಂತಿಯನ್ನುಂಟು ಮಾಡುತ್ತಿರುವ ಪಿಎಫ್‌ಐ ಸಿದ್ದರಾಮಯ್ಯನವರ ಪಾಪದ ಪಿಂಡ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅನೈತಿಕತೆ ರಾಜಕಾರಣ ಮಾಡುವ ಮೂಲಕ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ಈ ಇಬ್ಬರು ನಾಯಕರ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ನಳಿನಕುಮಾರ ಕಟೀಲ್ ಲೇವಡಿ ಮಾಡಿದರು.
ಹಾಲಕೆರೆ ಮಠಕ್ಕೆ ಬುಧವಾರ ಭೇಟಿ ನೀಡಿದ ಅವರು, ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಕಥೆ ಮುಗಿದಿದೆ. ಕಾಂಗ್ರೆಸ್ ಪಕ್ಷ ರಾಜ್ಯ, ಕೇಂದ್ರದಲ್ಲಿ ಮುಂದೆಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಒಂದು ದಿನ ಸಿದ್ದರಾಮಯ್ಯನ ಕೈ ಹಿಡಿದು ಓಡುತ್ತಾರೆ. ಮತ್ತೊಂದು ದಿನ ಡಿ.ಕೆ ಶಿವಕುಮಾರ ಕೈ ಹಿಡಿದು ಓಡುತ್ತಾರೆ. ರಾಹುಲ್ ಗಾಂಧಿ ಈ ಇಬ್ಬರಲ್ಲಿ ಯಾರ ಕೈಗಟ್ಟಿ ಮಾಡುತ್ತಾರೆಂಬುದರ ಬಗ್ಗೆ ಇಬ್ಬರಿಗೂ ಭಯವಿದೆ ಎಂದು ವ್ಯಂಗ್ಯವಾಡಿದರು.
ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಎರಡು ತಂಡಗಳಾಗಿ ಪಕ್ಷ ಸಂಘಟನೆ ಮಾಡುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನ ಸಾಮಾನ್ಯರಿಗೂ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೆವೆ. ಬಿಜೆಪಿಗೆ ಕಾಂಗ್ರೆಸ್, ಜಾತ್ಯಾತೀತ ಜನತಾದಳ ಸೇರಿದಂತೆ ಯಾವದೇ ಪಕ್ಷದಿಂದಲೂ ಯಾವುದೇ ಭಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.