ಪಾಲಿಕೆ ಆವರಣದಲ್ಲಿ ಹೈಡ್ರಾಮ: ವಿನಾಯಕ ಪೈಲ್ವಾನ್ ತಳ್ಳಾಡಿದ ಕಾಂಗ್ರೆಸ್ ಸದಸ್ಯರು

ಪಾಲಿಕೆ ಕೈ ಕೈ
Advertisement

ದಾವಣಗೆರೆ: ಬಿಜೆಪಿ ಸದಸ್ಯರೊಂದಿಗೆ ಕಾಂಗ್ರೆಸ್ ಸದಸ್ಯ ವಿನಾಯಕ ಪೈಲ್ವಾನ್ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ಮಹಾನಗರಪಾಲಿಕೆ ಆವರಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.
ಶನಿವಾರ ಮಹಾನಗರಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಯಿತು. ಬೆಳಗ್ಗೆ 12 ಗಂಟೆಯಿಂದ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಿತು. ಮೊದಲು ಕಾಂಗ್ರೆಸ್‌ನಿಂದ ಸವಿತಾ ಗಣೇಶ್ ಹುಲಿಮನೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಶಿವಲೀಲಾ ಕೊಟ್ರಯ್ಯ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಅಜ್ಞಾತ ಸ್ಥಳದಿಂದ ಬಿಜೆಪಿ ಮುಖಂಡರ ಕಾರಿನಲ್ಲಿ ಪಾಲಿಕೆ ಕಚೇರಿಗೆ ಮಾಜಿ ಮೇಯರ್ ಎಸ್.ಟಿ. ವೀರೇಶ್, ಪ್ರಸನ್ನಕುಮಾರ್, ಸೋಗಿ ಶಾಂತ್ ಕುಮಾರ್ ಅವರೊಂದಿಗೆ ಕಾಂಗ್ರೆಸ್ ಸದಸ್ಯ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಸಲು ಆಗಮಿಸಿದರು. ಈ ವೇಳೆ ಪಕ್ಷಕ್ಕೆ ದ್ರೋಹ ಮಾಡಬೇಡ ಬನ್ನಿ ಎಂದು ಕಾಂಗ್ರೆಸ್ ಸದಸ್ಯರು ಬೇಡಿದರೂ ಸೊಪ್ಪು ಹಾಕದೆ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿಗೆ ತೆರಳಿದರು. ವಿನಾಯಕ ಪೈಲ್ವಾನ್ ಬಿಜೆಪಿ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿನಾಯಕ ಪೈಲ್ವಾನ್ ಅವರಿಗೆ ಮುತ್ತಿಗೆ ಹಾಕಿ ಪಕ್ಷಕ್ಕೆ ದ್ರೋಹ ಮಾಡಬೇಡ. ಬನ್ನಿ ನಮ್ನೊಂದಿಗೆ ಎಂದು ಜೊತೆಗೆ ಕರೆದುಕೊಂಡು ಹೋಗಲು ಯತ್ನಿಸಿದರು. ಆದರೆ ಬಿಜೆಪಿ ಸದಸ್ಯರು ನಾಮಪತ್ರ ಸಲ್ಲಿಸಿ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯುವಂತೆ ಹೈಕಮಂಡ್ ಸೂಚನೆಯಂತೆ ಕಾರಿನಲ್ಲಿ ಕುರಿಸಿಕೊಂಡು ಹೋಗಲು ಯತ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ವಿನಾಯಕ ಪೈಲ್ವಾನ್ ಅವರನ್ನು ತಡೆದರು. ಆದರೆ ಈ ವೇಳೆ ನೂಕಾಟ, ತಳ್ಳಾಟ ನಡೆಯಿತು. ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ನಾಯಕರು ಹಿಂಬಾಲಿನ ರಾಜಕಾರಣ ಮಾಡುವುದೇ ಇವರ ಜಾಯಮಾನವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ನೀನೇ ಮೇಯರ್ ಆಗುವಂತೆ ಬಾ, ಭ್ರಷ್ಟ ಬಿಜೆಪಿಯೊಂದಿಗೆ ಹೋಗಬೇಡ ಬಾ ಎಂದು ಕರೆದರೂ, ಕೂಡ ನಿಮ್ಮ ಕಾಂಗ್ರೆಸ್ ಪಕ್ಷ ಏನು ಕೊಟ್ಟಿದೆ ಎಂದು ಪ್ರಶ್ನಿಸಿ ಬಿಜೆಪಿ ಕಾರಿನಲ್ಲಿ ತೆರಳಿದರು.
ಪೊಲೀಸ್ ಬೆಂಗಾವಲು
ಬಿಜೆಪಿ ಸದಸ್ಯರೊಂದಿಗೆ ನಾಮಪತ್ರ ಸಲ್ಲಿಸಿ ಹೊರ ಬರುವಾಗ ಕಾಂಗ್ರೆಸ್ ಸದಸ್ಯರು ದಿಕ್ಕಾರ ಕೂಗಿದರು. ಈ ವೇಳೆ ಪಾಲಿಕೆ ಆವರಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಬೆಂಗಾವಲಿನಲ್ಲಿ ಜಿಎಂಐಟಿ ಗೇಸ್ಟ್ ಹೌಸ್‌ಗೆ ತೆರಳಿದರು.
ನಾಮಪತ್ರ ಸಲ್ಲಿಕೆ
ಕಾಂಗ್ರೆಸ್‌ನಿಂದ ಮೇಯರ್ ಸ್ಥಾನಕ್ಕೆ ಸವಿತಾ ಗಣೇಶ್ ಹುಲಿಮನೆ, ಉಪಮೇಯರ್ ಸ್ಥಾನಕ್ಕೆ ಶಿವಲೀಲಾ ನಾಮಪತ್ರ ಸಲ್ಲಿಸಿದರು. ಬಿಜೆಪಿ ಸದಸ್ಯರೊಂದಿಗೆ ವಿನಾಯಕ ಪೈಲ್ವಾನ್ ಮೇಯರ್ ಸ್ಥಾನಕ್ಕೆ, ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಯಶೋಧ ಯಗ್ಗಪ್ಪ ನಾಮಪತ್ರ ಸಲ್ಲಿಸಿದರು. ಚುನಾವಣೆ 3 ಗಂಟೆಗೆ ನಡೆಯಲಿದೆ.