ಹುಬ್ಬಳ್ಳಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಹಲವು ರೀತಿಯಲ್ಲಿ ವಿಶೇಷ ದಿನ.
ಒಂದು ಜನ್ಮದಿನಾಚರಣೆ ಸಂಭ್ರಮ. ಅದೂ ತಮ್ಮ ಊರು ಹುಬ್ಬಳ್ಳಿಯೇ ಅಚರಿಸಿಕೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೊಂದು ತಾವು ಎಂಜಿನಿಯರಿಂಗ್ ಶಿಕ್ಷಣ ಪಡೆದ ಬಿ.ವಿ.ಬಿ ತಾಂತ್ರಿಕ ಕಾಲೇಜಿನ ಅಮೃತಮಹೋತ್ಸವ ಆಚರಣೆ ಸಂದರ್ಭ.
ಕಾಕತಾಳೀಯ ಎಂಬಂತೆ ಅವರ ಜನ್ನದಿನದಂದೇ ಬಿ.ವಿ.ಬಿ. ಅಮೃತ ಮಹೋತ್ಸವ ಅಚರಣೆ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಶುಭಾಶಯ ಕೋರಿದರು.
ಅತ್ತ ವೇದಿಕೆಯಲ್ಲಿ ಗಣ್ಯಮಾನ್ಯರು ಮುಖ್ಯಮಂತ್ರಿಯವರಿಗೆ ಶುಭಾಶಯ ಕೋರಿದರೆ ಅತ್ತ ವೇದಿಕೆ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳು ‘ ” “ಹ್ಯಾಪಿ ಬರ್ತ್ ಡೇ ಟು ಯೂ’ ಅಂದ್ರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಆರಂಭಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಹೊಯ್.. ಅಂತಾ ಘೋಷಣೆ ಕೂಗಿದರು. ಪಾರ್ಟಿ… ಪಾರ್ಟಿ… ಪಾರ್ಟಿ… ಎಂದು ಕೂಗಿದರು.
ವಿದ್ಯಾರ್ಥಿಗಳ ಪ್ರೀತಿಗೆ ಪುಳಕಿತರಾದ. ಸಿಎಂ ಪಾರ್ಟಿನಾ… ಆಯ್ತು ಪಾರ್ಟಿ ಅಂದ್ರು.. ಖುಷಿಯಾದ ವಿದ್ಯಾರ್ಥಿಗಳು ಕೂಗಾಟ ನಿಲ್ಲಿಸಿದರು. ಮಾತು ಮುಂದುವರಿಸಿದ ಮುಖ್ಯಮಂತ್ರಿಯವರು, ನಿಮ್ಮನ್ನೆಲ್ಲ ನೋಡಿದರೆ ತುಂಬಾ ಸಂತೋಷ ಆಗುತ್ತದೆ. ಅಷ್ಟೇ ಹೊಟ್ಟೆಕಿಚ್ಚು ಆಗುತ್ತದೆ. ಯಾಕೆಂದರೆ ನಾವು ಅವತ್ತಿಗಿಂತ ಇವತ್ತು ಈ ಕಾಲೇಜಿನ ಕ್ಯಾಂಪಸ್ ನಲ್ಲಿ ಇರಬೇಕಿತ್ತು ಅನಿಸುತ್ತದೆ. ಈ ಕಾಲೇಜು ಕ್ಯಾಂಪಸ್ ಅನುಭವ ಅದ್ಭುತ. ಕಾಲೇಜು ಆವರಣಕ್ಕೆ ನಾನು ಬಂದರೆ ಮತ್ತೆ ವಿದ್ಯಾರ್ಥಿಯಾಗುತ್ತೇನೆ ಎಂದು ಹೇಳುವ ಮೂಲಕ ಬಿ.ವಿ.ಬಿ ಕಾಲೇಜಿನಲ್ಲಿನ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡರು. ಅದ್ಭುತ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದೀರಿ. ನಿಮ್ಮ ಉಜ್ವಲವಾಗಿರಲಿ ಎಂದು ಶುಭ ಕೋರಿದರು.