ಪಾರಿಜಾತದ ಪುಷ್ಪ ಚಿಮ್ಮಡದ ಸುಂದ್ರವ್ವ ಮೇತ್ರಿ

Advertisement

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದ ಸುಂದ್ರವ್ವ ಮೇತ್ರಿ ಶ್ರೀ ಕೃಷ್ಣ ಪಾರಿಜಾತದ ಮಹಾನ್ ಕಲಾವಿದರು. ಅವರು ಎಲೆ ಮರೆಯ ಕಾಯಿಯಂತೆ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

55 ಆಸು ಪಾಸಿನಲ್ಲಿರುವ ಸುಂದ್ರವ್ವ ತಮ್ಮ ಹತ್ತನೆಯ ವಯಸ್ಸಿನಲ್ಲಿಯೇ ಪಾರಿಜಾತವನ್ನು ಕಲಿಯಲು ಆರಂಭಿಸಿದರು. ಗ್ರಾಮದ ದುಂಡಪ್ಪ ಸುಣಧೋಳಿಯವರಿಂದ ಪೂರ್ಣಪ್ರಮಾಣದಲ್ಲಿ ಪಾರಿಜಾತವನ್ನು ಕಲಿತರು. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಪಾರಿಜಾತ ಸೇವೆಗೆ ತೊಡಗಿಸಿಕೊಂಡರು.ನಾಲ್ಕು ದಶಕಗಳಿಂದ ಪಾರಿಜಾತಾ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿರುವ ಸುಂದ್ರವ್ವ ಮೇತ್ರಿಯವರಿಗೆ ಪಾರಿಜಾತವೇ ಉಸಿರು ಮತ್ತು ಎರಡು ಹೊತ್ತಿನ ಊಟಕ್ಕೆ ಆಸರೆಯಾಗಿದೆ. ದಾದನಟ್ಟಿ ಕಾಶಿಬಾಯಿ ಅವರ ಕಂಪನಿಯಲ್ಲಿ ಎರಡು ದಶಕಗಳ ಕಾಲ, ಜಮಖಂಡಿಯ ಮಲ್ಲಯ್ಯಸ್ವಾಮಿ ಅಥಣಿಯವರ ಹಾಗೂ ಮಹಾದೇವಿ ಅಥಣಿಯವರ ತಂಡದಲ್ಲಿ ಹಲವು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಪಾರಿಜಾತದ ಮೂಲಕವೇ ಅವರು ಬೆಂಗಳೂರು, ದಾವಣಗೇರಿ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಬೀದರ, ಕಲಬುರಗಿ ಹಾಗೂ ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ತಮ್ಮ ಪಾರಿಜಾತ ಕಲೆಯನ್ನು ಪ್ರದರ್ಸನ ಮಾಡಿ ಗಮನ ಸೆಳೆದಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರವೂ ಕೂಡಾ ಅವರ ಪಾರಿಜಾತವನ್ನು ಪ್ರದರ್ಶನ ಮಾಡಿದೆ.ಪಾರಿಜಾತದ ಗೊಲ್ಲತಿ, ರುಕ್ಮಿಣಿ, ಸತ್ಯಭಾಮೆ, ನಾರದ, ಪಾತ್ರಗಳನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಾರೆ. ಪಾರಿಜಾತದ ಜೊತೆಗೆ ಚೌಡಕಿ ಪದಗಳನ್ನು ಹಾಡುತ್ತಾರೆ.