ಧಾರವಾಡ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರಕಾರ ಬದ್ಧವಾಗಿದ್ದು, ಯೋಜನೆಯನ್ನು ವಿರೋಧಿಸುವ ಪರಿಸರವಾದಿಗಳ ಮನವೊಲಿಸುವ ಕೆಲಸವನ್ನು ಸಾರ್ವಜನಿಕರು ಮಾಡಬೇಕಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಅವರು ನವೀಕೃತ ಧಾರವಾಡ ರೈಲು ನಿಲ್ದಾಣ ಲೋಕಾರ್ಪಣೆ ಮಾಡಿ ಮಾತನಾಡಿದರು. ಕೆಲ ಪರಿಸರವಾದಿಗಳು ರೈಲು ಮಾರ್ಗವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕೇಂದ್ರ ಸರಕಾರ ವನ್ಯಜೀವಿಗಳಿಗೆ ಧಕ್ಕೆ ಮಾಡದೇ, ಪರಿಸರವನ್ನು ಹಾಳು ಮಾಡದೇ ಯೋಜನೆ ಅನುಷ್ಠಾನಗೊಳಿಸಲಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಿಂದ ಈ ಭಾಗದ ಜನರ ಸಂಚಾರಕ್ಕೆ ವ್ಯಾಪಾರ-ವಹಿವಾಟಿಗೆ ಅನುಕೂಲವಾಗಲಿದೆ. ಆದ್ದರಿಂದ ಸಾರ್ವಜನಿಕರು ಪರಿಸರವಾದಿಗಳನ್ನು ಮನವೊಲಿಸಲು ಪ್ರಯತ್ನಿಸಬೇಕು. ರೈಲು ಮಾರ್ಗದಿಂದಾಗುವ ಅನುಕೂಲತೆಗಳನ್ನು ತಿಳಿಸಿಕೊಡಬೇಕು. ಸಾರ್ವಜನಿಕರಿಂದ ಯೋಜನೆಗೆ ಪ್ರಬಲ ಆಗ್ರಹ ಹೊರಹೊಮ್ಮಬೇಕಿದೆ ಎಂದರು.