ಬಿಜೆಪಿಯಿಂದ ನ.20ರಂದು ಹಮ್ಮಿಕೊಂಡಿರುವ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದ ಹೊರ ವಲಯದಲ್ಲಿ ಸಮಾವೇಶಕ್ಕಾಗಿ ಹಾಕಲಾಗಿರುವ ಬೃಹತ್ ವೇದಿಕೆ ಬಳಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಮಾವೇಶಕ್ಕೆ 10 ಲಕ್ಷ ಜನರು ಪಾಲ್ಗೊಳ್ಳುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಲ್ಗೊಳ್ಳುವರು ಎಂದರು.
ನಮ್ಮ ಪಕ್ಷ ಎಸ್ಟಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದಿಂದ ವಾಲ್ಮೀಕಿ ಜಯಂತಿ ಆಚರಣೆ ಆರಂಭಿಸಿ, ಸರ್ಕಾರಿ ರಜೆ ಘೋಷಣೆ ಮಾಡಿದರು. ತದನಂತರ ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಮಾಡಿದರು. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ ವಾಲ್ಮೀಕಿ ಪುತ್ತಳಿಗೆ ಮಾಲಾರ್ಪಣೆ ಮಾಡಿದರು ಎಂದು ಅವರು ಸ್ಮರಿಸಿದರು.
ಕಾಂಗ್ರೆಸ್ ಪಕ್ಷ ವಾಲ್ಮೀಕಿ ಸಮಾಜವನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡರು. ಶಕುನಿ ಮತ್ಸರ್ಯಯುತ ರಾಜಕಾರಣ ಮಾಡಿದರು. ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಅಹಿಂದ ಮುಖಂಡ ಎಂದು ಬಿಂಬಿಸಿಕೊಂಡು ರಾಜಕಾರಣ ಮಾಡಿದರು. ಆದರೆ ಯಾವುದೇ ಕೊಡುಗೆ ನೀಡಲಿಲ್ಲ ಎಂದು ಅವರು ಜರಿದರು.
ಸಿದ್ದರಾಮಯ್ಯ ತಮ್ಮ ಅಧಿಕಾರ ಅವಧಿಯಲ್ಲಿ ಸಿದ್ದರಾಮಯ್ಯ ಮೀಸಲಾತಿ ಹೆಚ್ಚಳ ಮಾಡಲು ಹೋಗಲಿಲ್ಲ. ಅವರು ಸದಾ ದಮ್ಮು ತಾಕತ್ತು ಬಗ್ಗೆ ಮಾತನಾಡಿದರು. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಳ ಮಾಡಿದ್ರು. ಇದು ನಮ್ಮ ದಮ್ಮು, ತಾಕತ್ತು ಎಂದು ಅವರು ತಿಳಿಸಿದರು.
ನಮ್ಮ ಪಕ್ಷದ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದ ಕಾರಣಕ್ಕೆ ಈ ಸಮಾವೇಶದ ಮೂಲಕ ಅಭಿನಂದನೆ ಸಲ್ಲಿಸುವ ಕೆಲಸ ಮಾಡಲಿದ್ದಾರೆ. ರಾಯಚೂರು, ಯಾದಗಿರಿ, ಗದಗ, ಚಿತ್ರದುರ್ಗ, ಕೊಪ್ಪಳ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಜನ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.
ಸಮಾವೇಶಕ್ಕೆ 130 ಎಕರೆ ಪ್ರದೇಶ. 120*40 ಅಡಿ ವೇದಿಕೆ. ಇದರ ಜೊತೆಗೆ ಎರಡು ಇತರೆ ವೇದಿಕೆ ಇದೆ. 3 ಲಕ್ಷ ಚದರ ಅಡಿ ಪೆಂಡಾಲ್ ಇದೆ. 1 ಲಕ್ಷ ಚದರ ಅಡಿ ಅಡುಗೆ ಕೆಲಸಕ್ಕೆ ಬಳಕೆ. 300ಕ್ಕು ಹೆಚ್ಚು ಊಟದ ಮಳಿಗೆ ತೆರೆಯಲಾಗಿದೆ ಎಂದು ಅವರು ಹೇಳಿದರು.
ಸಂಸದ ವೈ.ದೇವೇಂದ್ರಪ್ಪ, ಪರಿಷತ್ ಸದಸ್ಯ ಸತೀಶ್ ವೈ.ಎಂ., ಶಾಸಕ ಸೋಮಶೇಖರ ರೆಡ್ಡಿ, ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಿ ಗೌಡ, ಡಾ. ಎಸ್.ಜಿ.ವಿ.ಪಿ. ಮಹಿಪಾಲ್, ನರಸಿಂಹ ನಾಯಕ್, ಸಿದ್ದೇಶ್ ಯಾದವ್, ಹಾವೇರಿ ಮಂಜಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.