ಹಳಿಯಾಳ: ಪತ್ನಿಯನ್ನು ಕೊಂದು ಯಾರಿಗೂ ಸಂಶಯ ಬಾರದಂತೆ ಶವವನ್ನು ನೀರಿನ ಪ್ಲಾಸ್ಟಿಕ್ ಬ್ಯಾರಲ್‌ನಲ್ಲಿ ತುಂಬಿಕೊಂಡು ದೂರದ ಕಾಡಿನಲ್ಲಿ ಬಿಸಾಕಿದ ಸಿನಿಮೀಯ ರೀತಿ ಘಟನೆ ನಡೆದಿದ್ದು ಈ ಪ್ರಕರಣವನ್ನು ಹಳಿಯಾಳ ಪೊಲೀಸರು ಭೇದಿಸಿದ್ದಾರೆ.
ಕೊಲೆ ಆರೋಪಿ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ನಿವಾಸಿ ತುಕಾರಾಮ ಅಪ್ಪಣ್ಣ ಮಡಿವಾಳ(35) ಹಾಗೂ ಸಹಕರಿಸಿದ ಇನ್ನಿಬ್ಬರು ಆರೋಪಿಗಳಾದ ಖಾನಾಪುರ ತಾಲೂಕಿನ ಚುಂಚವಾಡ ಗ್ರಾಮದ ಚಾಲಕ ರಿಜ್ವಾನ ಅಬುದಾಯಿರ್ ಕುಂಬಾರಿ(23) ಹಾಗೂ ಅಳ್ನಾವರದ ಹಮಾಲಿ ಕೆಲಸ ಮಾಡುವ ಸಮೀರ ನಜೀರ ಪಂತೋಜಿ(29) ಅವರನ್ನು ಬಂಧಿಸಲಾಗಿದೆ. ಶಾಂತಕುಮಾರಿ ತುಕಾರಾಮ ಮಡಿವಾಳ(38) ಕೊಲೆಯಾದ ಮಹಿಳೆ.
ಫೆ. 22ರಂದು ರಾತ್ರಿ ತಾಲೂಕಿನ ತೇರಗಾಂವ ಗ್ರಾಮದಲ್ಲಿ ಕೊಲೆ ನಡೆದಿದ್ದು, ಮರುದಿನ ಶವವನ್ನು ನೆರೆಯ ಜೋಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಿನಲ್ಲಿ ಶವವನ್ನು ಎಸೆದು ಕೊಲೆ ಪ್ರಕರಣ ಮುಚ್ಚಲು ಯತ್ನಿಸಲಾಗಿತ್ತು.
22ರಂದು ರಾತ್ರಿ ಇಬ್ಬರ ನಡುವೆ ಜಗಳ ಆರಂಭವಾಗಿ, ಆರೋಪಿ ತುಕಾರಾಮ ಪತ್ನಿಯ ಮೈಮೇಲೆ ಕುಳಿತು ಕತ್ತು ಹಿಸುಕಿ ಸಾಯಿಸಿದ್ದಾನೆ. ಮರುದಿನ ಇನ್ನಿಬ್ಬರು ಆರೋಪಿಗಳೊಂದಿಗೆ ಶವವನ್ನು ಯಾರಿಗೂ ಸಂಶಯ ಬರದಂತೆ ನೀರಿನ ಪ್ಲಾಸ್ಟಿಕ್ ಬ್ಯಾರಲ್‌ನಲ್ಲಿ ತುಂಬಿಕೊಂಡು ಟಾಟಾ ಎಸ್ ವಾಹನದಲ್ಲಿ ಹಾಕಿ ರಾಮನಗರಕ್ಕೆ ತೆರಳಿ ಅಲ್ಲಿನ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಸಾಕಿ ಬಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.