ಹುಬ್ಬಳ್ಳಿ: ದೇಶದಲ್ಲಿ ಮೂವರು ಗಂಧರ್ವರು ಇದ್ದು, ಅದರಲ್ಲಿ ಧಾರವಾಡ ನೆಲದ ಇಬ್ಬರು ಗಂಧರ್ವರರು ಇರುವುದು ಈ ನೆಲದ ಪುಣ್ಯ ಎಂದು ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ ಹೇಳಿದರು.
ಸವಾಯಿ ಗಂಧರ್ವ ಸಭಾಂಗಣದಲ್ಲಿ ಸವಾಯಿ ಗಂಧರ್ವ ಮ್ಯೂಸಿಕ್ ಫೌಂಡೇಶನ್ ವತಿಯಿಂದ ಸವಾಯಿ ಗಂಧರ್ವರ ಸ್ಮರಣಾರ್ಥ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಪಂಡಿತ ಸವಾಯಿ ಗಂಧರ್ವರ ಅಂಚೆ ಚೀಟಿ’ಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪಂ. ಭೀಮಸೇನ ಜೋಶಿ ಎಂದರೆ ಈ ನಾಡಿಗೆ ಕೀರ್ತಿ. ಇಂದು ಅವರ ಗುರುಗಳಾದ ಪಂ. ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ಇದೊಂದು ಭಾವನಾತ್ಮಕ ಕಾರ್ಯಕ್ರಮವಾಗಿದೆ. ಸವಾಯಿ ಗಂಧರ್ವ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಸೇರಿದಂತೆ ಧಾರವಾಡ ನೆಲದ ಹಲವರು ವಿಶ್ವದಲ್ಲಿ ಹೆಸರು ಮಾಡಿದ್ದಾರೆ. ಕಲೆ, ಸಂಸ್ಕೃತಿ, ಶಿಕ್ಷಣದಿಂದ ಹೆಸರುವಾಸಿಯಾಗುವವರು ತೀರ ವಿರಳ ಅಂತವರ ಸಾಲಿನಲ್ಲಿ ಸವಾಯಿ ಗಂಧರ್ವರು ನಿಲ್ಲುತ್ತಾರೆ ಎಂದರು.