ನೈಜ ಜನಾಶಯ ಬಿಂಬಿಸಿದ ಮೂರು ಪ್ರಸಂಗಗಳು

ಜನಾಶಯ
Advertisement

ಜನರ ಶ್ರದ್ಧೆ-ಭಾವನೆ, ವಿಶ್ವಾಸಗಳಿಗೆ ಎಣೆಯುಂಟೆ? ಒಂದು ವಾರದ ಅವಧಿಯಲ್ಲಿ ಜನರೇ ಇದನ್ನು ಸಾಬೀತು ಮಾಡಿದ್ದಾರೆ. ಮೂರು ವಿದ್ಯಮಾನಗಳು ಇಡೀ ರಾಜ್ಯವಷ್ಟೇ ಅಲ್ಲ, ದೇಶದ ಗಮನವನ್ನು ಸೆಳೆದಿವೆ.
ಜನವರಿ ೨ರಂದು ವಿಜಯಪುರ ಜ್ಞಾನಯೋಗಾಶ್ರಮದ ಯೋಗಿ, ಭಕ್ತರ, ಜನಸಾಮಾನ್ಯರ ಮನದಲ್ಲಿ ನಡೆದಾಡುವ ದೇವರು ಎಂದೇ ಆರಾಧಿಸಲ್ಪಡುತ್ತಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಐಕ್ಯರಾದರು. ಈ ನಾಡು ಕಂಡ ಬಹು ಅಪರೂಪದ, ಶ್ರೇಷ್ಠ ಸಂತರು ಶ್ರೀ ಸಿದ್ಧೇಶ್ವರರು. ಅವರ ಸರಳತೆ, ಶುಭ್ರತೆ, ಪ್ರಕೃತಿ ಆರಾಧನೆಯ, ತನ್ಮೂಲಕ ಜ್ಞಾನ ದಾಸೋಹ ಬಿತ್ತಿದ ರೀತಿ ಅನನ್ಯ. ತನಗಾಗಿಯೇ ಅಲ್ಲ. ಜನರಿಗಾಗಿ, ಸಮುದಾಯಕ್ಕಾಗಿ, ಸಮಾಜದ ಅಭ್ಯುದಯಕ್ಕಾಗಿ ಜ್ಞಾನ ಉಣಬಡಿಸಿದ ಈ ಸಂತ ಅಸ್ವಸ್ಥಗೊಂಡಾಗ ಕೇವಲ ಮಾತಿನಿಂದ ಮಾತಿಗೆ, ವ್ಯಕ್ತಿಯಿಂದ ವ್ಯಕ್ತಿಗಳಿಗೆ ಸುದ್ದಿ ಹೋಗಿ ಲಕ್ಷಾಂತರ ಮಂದಿ ಆಶ್ರಮಕ್ಕೆ ದರ್ಶನಕ್ಕಾಗಿ ದೌಡಾಯಿಸಿದ್ದರು.
ತಮ್ಮ ಮನೆಯ ಹಿರಿಯ, ಮನೆಯ ದೇವರು ಸಂಕಷ್ಟದಲ್ಲಿದ್ದಾರೆ ಎಂಬಂತೆ ಕುಟುಂಬ ಸಮೇತರಾಗಿ ಆಶ್ರಮದ ಮುಂದೆ ಪ್ರಾರ್ಥಿಸಿದವರು ಅದೆಷ್ಟೋ…? ಮನೆ ಮನೆಗಳಲ್ಲಿ ದೀಪ ಹಚ್ಚಿ, ಕೆಲಸ ಕಾರ್ಯ ಬದಿಗೊತ್ತಿ ಆರಾಧಿಸಿದವರು ಇನ್ನೆಷ್ಟೋ…? ಜನವರಿ ೨ರಂದು ಸಂಜೆ ಶ್ರೀಗಳು ಅಸುನೀಗಿದಾಗ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಸುಮಾರು ಮೂವತ್ತು ಲಕ್ಷದಷ್ಟು ಜನ, ನಡೆದಾಡಲು ಪ್ರಾಣವಿದೆ ಎನ್ನುವವರೆಲ್ಲ, ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದರು.
ಎಂತಹ ಶ್ರದ್ಧೆ, ಭಕ್ತಿ-ಭಾವನೆ ನೋಡಿ. ಹಾಗಂತ ಅಷ್ಟು ಜನರೂ ಹಸಿಯಲಿಲ್ಲ. ಪ್ರತಿಯೊಬ್ಬರಿಗೂ ದಾಸೋಹ ಉಣಬಡಿಸಲಾಯಿತು. ಆಶ್ಚರ್ಯವಲ್ಲವೇ? ಒಂದೇ ಒಂದು ಅವಘಡ, ಅವಾಂತರ, ಕೀಟಲೆ ಏನೇನೂ ಇಲ್ಲ. ಅಲ್ಲಿ ಮಕ್ಕಳಿದ್ದರು. ಯುವಕ-ಯುವತಿಯರಿದ್ದರು. ಮಹಿಳೆ-ಹಿರಿಯ ನಾಗರಿಕರಿದ್ದರು. ತೊಂಬತ್ತು ವರ್ಷದ ವೃದ್ಧರಿಂದ ಹತ್ತು ವರ್ಷದ ಬಾಲಕರವರೆಗೂ ಸೇರಿದ್ದ ಸಮೂಹ, ಜನಸಾಗರ ಅಶಿಸ್ತು- ಅವಘಡಗಳಿಗೆ ಲವಲೇಶವೂ ಇಲ್ಲದಂತೆ ನೋಡಿಕೊಂಡಿತು.
ಅತ್ಯಂತ ಶಾಂತರಾಗಿ ಜನಸಮೂಹ ಶ್ರೀಗಳ ದರ್ಶನ ಪಡೆದರು. ಒಂದೇ ದಿನ ಆಗಲಿಲ್ಲ. ನಂತರ ಅವರ ಚಿತಾಭಸ್ಮದ ದರ್ಶನಕ್ಕೂ ಅಷ್ಟೇ ಜನಸಾಗರ ಮೂರು ದಿನಗಳವರೆಗೆ ಇತ್ತು. ಯಾರೂ ಕರೆದವರಿಲ್ಲ. ಯಾರೂ ಬೇಡ ಎಂದವರೂ ಇಲ್ಲ.
ಹಾಗಂತ ಸಿದ್ಧೇಶ್ವರ ಸ್ವಾಮಿಗಳು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದದ್ದು ಸರಳತನ. ಶಾಂತಿ. ಸೌಹಾರ್ದತೆ. ಬದುಕಿನುದ್ದಕ್ಕೂ ಶ್ರೀಗಳು ಬಿತ್ತಿದ್ದ ಇವನ್ನೇ ಇಡೀ ಲಕ್ಷಾಂತರ ಜನ ಅಂತಿಮ ಸಂಸ್ಕಾರದಲ್ಲೂ ಪಾಲಿಸಿದರು. ಇದೇ ಚಿತ್ರನಟನೋ, ರಾಜಕಾರಣಿಯೋ ಇನ್ಯಾರೋ ಆಗಿದ್ದರೆ ಹಿಂಸಾಚಾರ, ಕಾಲ್ತುಳಿತ ಎಲ್ಲವೂ ನಡೆಯುತ್ತಿತ್ತು. ಒಂದು ಪಿಕ್‌ಪಾಕೆಟ್ ಕೂಡ ಇಲ್ಲಿ ಆಗಲಿಲ್ಲ. ಯಾರೂ ಹಸಿವು ನೀರಡಿಕೆಯಿಂದ ಬಳಲಿಲ್ಲ. ಅತ್ಯಂತ ದುಃಖತಪ್ತರಾಗಿ ಎಲ್ಲರೂ ಶ್ರದ್ಧಾಂಜಲಿ ಅರ್ಪಿಸಿದಿರಲ್ಲ…!?
ಬಹುಶಃ ಜನರಿಗೆ ಯಾವ ಜ್ಞಾನ ನೀಡುತ್ತೇವೆ? ಯಾವ ಶಿಕ್ಷಣ ಒದಗಿಸುತ್ತೇವೆ? ಏನನ್ನು ಬಿತ್ತುತ್ತೇವೆ ಅದನ್ನೆ ಬೆಳೆಯುತ್ತೇವೆ ಎಂಬುದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನ. ಇದೊಂದು ಅವ್ಯಕ್ತ-ಅಗೋಚರ ಶಕ್ತಿಯೇ ಎನಿಸಿಬಿಟ್ಟಿತು.
ನಾಡಿನ ಮಠ ಮಾನ್ಯಗಳು ಈಗ ವಿವಾದಕ್ಕೆ ಒಳಗಾಗಿವೆ. ವ್ಯಾಪಾರಕ್ಕೆ ಇಳಿದಿವೆ. ಇತ್ತೀಚೆಗಂತೂ ಅನೈತಿಕತೆಯ ವಿವಾದವೂ ಎದ್ದಿದೆ. ಸನ್ಯಾನಿ ತ್ಯಾಗಿ ಪದಗಳೇ ಅರ್ಥ ಕಳೆದುಕೊಂಡಿವೆ. ಅಂಥವರನ್ನು ಹೀಗಳೆವ, ನಿರ್ಲಕ್ಷಿಸುವ, ಅಪಹಾಸ್ಯವನ್ನು ಜನ ಮಾಡಿದರೂ ತೆಪ್ಪಗಿರುವ, ತಮ್ಮ “ಕಾಯಕ” ಮುಂದುವರಿಸುವ ಅಂಥವರೆಲ್ಲಿ? ಜೀವನದಲ್ಲಿ ಒಂದು ಪೈಸೆಯನ್ನೂ ಮುಟ್ಟದ, ಜನರಿಗೆ ಬದುಕು ಕಲಿಸಿ ಅದರಂತೆ ನಡೆದ ಸಿದ್ಧೇಶ್ವರ ಸ್ವಾಮಿಗಳೆಲ್ಲಿ?
ಹಾಗಾಗಿಯೇ ಲಕ್ಷಾಂತರ ಮಂದಿ ಅವರ ದೇಹತ್ಯಾಗದ ಸುದ್ದಿ ಕೇಳಿ ನೆರೆದರು.
ಇನ್ನೊಂದು ಘಟನೆಯನ್ನು ನೋಡಿ.
ಎಂತಹ ಅದ್ದೂರಿ, ಆಡಂಬರ, ವೈಭವ ತೋರಿಸಿದರೂ ಆಕರ್ಷಿಸಲಾಗದ ಜನಸಾಮಾನ್ಯ ತಾವು ನಂಬಿದವರನ್ನು ಶ್ರದ್ಧೆಯಿಂದ ಪೂಜಿಸುತ್ತಾನೆ ಎನ್ನುವುದಕ್ಕೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಠದ ಜಾತ್ರೆ ಸಾಕ್ಷಿ.
ಸಾಧು ಸಂತರ, ಯೋಗಿಯ ನಾಡು ಕೊಪ್ಪಳದ ಶ್ರೀ ಸಿದ್ಧೇಶ್ವರ ಜೀವಂತವಾಗಿ ಸಮಾಧಿಗೊಂಡ ದಿನ ಅಲ್ಲಿ ಜಾತ್ರೆ ನಡೆಯುತ್ತದೆ. ಜನವರಿ ೭ರಂದು ಶ್ರೀ ಗವೀಶನ ರಥೋತ್ಸವ. ದಕ್ಷಿಣ ಭಾರತದ ಕುಂಭಮೇಳ ಎಂದೇ ಇದು ಪ್ರತೀತಿ ಪಡೆಕೊಂಡಿರುವಂಥದ್ದು.
ಮೂರು ವರ್ಷಗಳ ಕೋವಿಡ್‌ನಲ್ಲಿ ನರಳಿದ ಜನ ಗವೀಶನ ದರ್ಶನಕ್ಕೆ ಕಾತರಿಸುತ್ತಿದ್ದರು. ದಾಸೋಹ ಪರಂಪರೆಯ ಮತ್ತು ಹಸಿವು, ಬಳಲಿಕೆ ನೀಗಿಸುವ ಆರೋಗ್ಯದ ಪರಿಕಲ್ಪನೆ ನೀಡುವ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆ ನಡೆದಾಗ, ಲಕ್ಷಾಂತರ ಜನ ನೆರೆದಿತ್ತು. ಇಡೀ ಕೊಪ್ಪಳ ನಗರ ಜನಸಾಗರದಿಂದ ತುಂಬಿತ್ತು.
ಗವೀಶನ ಜಾತ್ರೆಗೆ ಬನ್ನಿ. ಪ್ರಸಾದ ಸ್ವೀಕರಿಸಿ. ಇದು ಸ್ವಾಮಿಗಳು ನೀಡಿದ್ದ ಕರೆ. ಹಾಗೆಯೇ ಜಾತ್ರೆಗೆ ಜನ ಓಡೋಡಿ ದೌಡಾಯಿಸಿದರು. ಎಂತಹ ಭಕ್ತಿ? ಎಂತಹ ಶ್ರದ್ಧೆ. ಹಾಗಂತ ಇವೆಲ್ಲ ಮೂಢರು, ಮೌಢ್ಯನಂಬಿಕೆಯವರು, ಅಶಿಕ್ಷಿತರು ಎನ್ನಬೇಡಿ.
ತ್ರಿವಿಧ ದಾಸೋಹದಿಂದ ಪ್ರೇರಿತರಾದ ಶಿಕ್ಷಣವಂತರಿವರು. ವಿದ್ವಾಂಸರು ಸೇರಿದಂತೆ ಎಲ್ಲ ಸಮುದಾಯದ ಜನ ಜಾತಿ ಮತ ಪಂಥಗಳಿಲ್ಲದೇ ಆಗಮಿಸಿದ್ದರು. ಮಠದ ಬಯಲು ಜನಸಾಗರದಿಂದ ತುಂಬಿತ್ತು. ಜನರ ಭಕ್ತಿ ಶ್ರದ್ಧೆ ಹೇಗಿದೆ ಎಂದರೆ ಮಠದ ಗವಿ ಗುಡ್ಡದಿಂದ ಶ್ರೀಗಳು ಒಂದು ಮನವಿ ಮಾಡಿಕೊಂಡರು. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅಸ್ತಂಗತರಾಗಿದ್ದಾರೆ. ನಾವೆಲ್ಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ಎರಡು ನಿಮಿಷ ಎಲ್ಲರೂ ಮೌನದಿಂದ ಇರಿ ಎಂದಷ್ಟೇ ಈ ಲಕ್ಷಾಂತರ ಜನರನ್ನು ಕೋರಿದರು.
ಎಂತಹ ವಿಚಿತ್ರ ಗಮನಿಸಿ. ಸಂಪೂರ್ಣ ಶಾಂತವಾಯ್ತು ಜನಸಾಗರ. ಮರಿಪಿಳ್ಳೆ ಕೂಡ ದೊಡ್ಡ ಉಸಿರೆತ್ತಲಿಲ್ಲ. ಜಾತ್ರೆಗೆ ಆಗಮಿಸಿದ್ದ ಈಶಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ ಆಶ್ಚರ್ಯಚಕಿತರಾದರು. ಕಾರ್ಪೋರೇಟ್ ಸಂಸ್ಕೃತಿಯಲ್ಲಿ ಬೆಳೆದ ಈಶಾದ ಶಿಸ್ತು ಎಲ್ಲಿ? ಗವಿಮಠದ ಭಕ್ತರ ಭಾವನೆಗಳೆಲ್ಲಿ? ಇದು ಖುದ್ದು ಸದ್ಗುರುಗಳನ್ನೂ ಬೆರಗುಗೊಳಿಸಿತು.
ಗವಿಮಠದ ಜಾತ್ರೆಯಲ್ಲಿ ಹಣ ಕಳೆದುಕೊಂಡೆ, ಒಡವೆ ದೋಚಲಾಯಿತು. ಕಾಲ್ತುಳಿತಕ್ಕೆ ಒಳಗಾದೆ. ಊಹುಂ. ಒಂದೇ ಒಂದು ಪ್ರಕರಣವಿಲ್ಲ. ವಿಶೇಷವೆಂದರೆ ಅಲ್ಲಿದ್ದುದು ಅತೀ ಕನಿಷ್ಟ ಪೊಲೀಸ್ ಬಂದೋಬಸ್ತ್.
ಒಂದು ಸಮುದಾಯ ಬಂದ ಭಕ್ತಾದಿಗಳಿಗೆ ಉಚಿತ ಮಿರ್ಚಿ ನೀಡಿತು. ಎಪ್ಪತ್ತೈದು ಕ್ವಿಂಟಲ್ ಹಿಟ್ಟಿನಿಂದ, ಇಪ್ಪತ್ತೈದು ಕ್ವಿಂಟಲ್ ಮೆಣಸಿನಕಾಯಿಯಿಂದ ಲಕ್ಷಾಂತರ ಮಂದಿಗೆ ದಿನವಿಡೀ ಮಿರ್ಚಿ ಕರಿದು ಭಕ್ತಿ ಭಾವನೆ ತೋರಿದರು. ಊಹುಂ ಒಂದೇ ಒಂದು ಅಘಡಗಳಾಗಲಿಲ್ಲ. ಸರತಿ ಸಾಲು ತಪ್ಪಲಿಲ್ಲ. ಮಿರ್ಚಿ ಸಿಕ್ಕಿಲ್ಲ ಎಂದು ಹೇಳಿದವರಿಲ್ಲ. ದೂರಿದವರಿಲ್ಲ. ಆರೂವರೆ ಲಕ್ಷ ಮಿರ್ಚಿಯನ್ನು ಜನ ತಿಂದರು. ಅಂದರೆ ಮಿರ್ಚಿ ಪ್ರಸಾದವನ್ನು ಸವಿದರು. ಅದೇ ರಾಜಕೀಯ ಸಮಾವೇಶವೋ, ಇನ್ನೇನೋ ಆಗಿದ್ದರೆ ಊಟ ತಿಂಡಿ ಕುರಿತ ಜಟಾಪಟಿಗಳೇ ಜೋರಾಗಿರುತ್ತಿದ್ದವು.
ವಿಚಿತ್ರ ಎಂದರೆ ಯಾರೂ ಯಾರನ್ನೂ ಕರೆದಿರಲಿಲ್ಲ. ಯಾರಿಗೂ ಹೀಗೆ ಮಾಡಿ, ಹಾಗೆ ಹೋಗಿ ಎಂದು ಹೇಳಿದವರಿಲ್ಲ. ಗವಿಮಠದ ಜಾತ್ರೆಯ ಈ ವರ್ಷದ ವಿಶೇಷ ಎಂದರೆ ಬರಡು-ಬಯಲು ಭೂಮಿಗಳನ್ನು ಹಸಿರಾಗಿಸುವ ಸಂಕಲ್ಪ ತೊಟ್ಟಿದ್ದು. ಪ್ರತಿಯೊಬ್ಬರೂ ಗಿಡ ನೆಡಿ, ಬೆಳೆಸಿ… ಕೊಪ್ಪಳವನ್ನು ಹಸಿರಾಗಿಸೋಣ. ಹಸಿರು ಹೊದಿಕೆ ಹೊದಿಸೋಣ ಎನ್ನುವ ಸಂದೇಶಕ್ಕೆ ಭಕ್ತ ಸಮೂಹವೇ ಸ್ಪಂದಿಸುತ್ತಿದೆ ಈಗ. ಎಷ್ಟು ಘನ ಉದ್ದೇಶ, ಪುಣ್ಯ ಕಾರ್ಯವಿದು ನೋಡಿ.
ಇನ್ನೊಂದು ಗಮನಿಸಲೇಬೇಕಾದ ವಿದ್ಯಮಾನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಸಂತ-ಶರಣರ ನಾಡು ಹಾವೇರಿಯಲ್ಲಿ ಜರುಗಿದ ೮೬ನೇ ಸಾಹಿತ್ಯ ಸಮ್ಮೇಳನ ಈ ಸಾರೆ ಜನಜಾತ್ರೆಯೇ ಆಗಿತ್ತು.
ನಗರದಿಂದ ೯ ಕಿಲೋ ಮೀಟರ್ ದೂರದಲ್ಲಿ ದೇವಗಿರಿಯ ಗುಡ್ಡದಲ್ಲಿ, ಸಾಹಿತ್ಯ ಸಮ್ಮೇಳನ ಜರುಗಿದರೂ ಲಕ್ಷಾಂತರ ಮಂದಿ ಆಗಮಿಸಿದ್ದರು. ಇಲ್ಲಿಯೂ ಅಷ್ಟೇ. ಬಂದವರೆಲ್ಲ ಮಹಾನ್ ಪುಸ್ತಕಹೊತ್ತು, ಓದಿ, ಮಸ್ತಕಕ್ಕಿಳಿಸಿ ವಾದ-ವಿವಾದ-ತರ್ಕ-ಜಿಜ್ಞಾಸೆಗೆ ಬಿದ್ದವರಲ್ಲ. ಜನಸಾಮಾನ್ಯರು.
ಕನ್ನಡದ ಬಗ್ಗೆ, ಭಾಷೆ, ಸಂಸ್ಕೃತಿಯ ಬಗ್ಗೆ ಕಾಳಜಿ ಕಳಕಳಿ ಹೊಂದಿದವರು ಅಷ್ಟೇ. ಈ ಸಾರೆಯ ಸಾಹಿತ್ಯ ಸಮ್ಮೇಳನದಲ್ಲಿ ಒಂದಿನಿತೂ ಗಲಾಟೆ-ಗದ್ದಲಗಳಿರಲಿಲ್ಲ. ಸರ್ಕಾರ ಶಿಸ್ತು-ನಿಯಮ-ಕಟ್ಟಳೆ ವಿಧಿಸಿದರೂ ಕೂಡ ಸೆಣಸಾಟಕ್ಕೆ ಇಳಿದು ರಂಪಾಟಗಳು ಆಗಲಿಲ್ಲ. ಕಾರಣ, ಬಂದವರೆಲ್ಲ ಮುಗ್ಧರು. ಗ್ರಾಮೀಣ ಭಾಗದ ಜನ. ಆಸಕ್ತಿಯ ಜೊತೆಗೆ ಬದುಕಿನ ಬದಲಾವಣೆ ಬಯಸಿದವರು.
ಈ ಸಾರೆಯ ಸಾಹಿತ್ಯ ಸಮ್ಮೇಳನದಲ್ಲಿ ಮಹಾನ್ ಮಹಾನ್ ಪಂಡಿತರು, ಹೆಸರಾಂತ ದಿಗ್ಗಜುರಗಳಿದ್ದುದು ಕಡಿಮೆಯೇ. ಜಿಜ್ಞಾಸೆ, ವಿವಾದಗಳ ಸರಣಿಯಿಂದ ದೂರವೇ. ಆದರೆ ಸಾಹಿತ್ಯ ಸಮ್ಮೇಳನವನ್ನು ಹೀಗೂ ಅಚ್ಚುಕಟ್ಟಾಗಿ, ವಿಶೇಷವಾಗಿ ಯಾವುದೇ ಗೊಂದಲ ಗೋಜಲಿಲ್ಲದೇ ನಡೆಸಬಹುದು ಎನ್ನುವುದಕ್ಕೆ ಹಾವೇರಿ ಸಮ್ಮೇಳನ ನಿಜಕ್ಕೂ ಸಾಕ್ಷಿಯೇ.
ಲಕ್ಷಾಂತರ ಜನ ಮೂರು ದಿನವೂ ಸೇರಿದ್ದರೂ ಊಟ-ತಿಂಡಿ-ನೀರಿಗಾಗಿ ಘರ್ಷಣೆ ಲಾಠಿ ಪ್ರಹಾರಗಳು ಆಗಲಿಲ್ಲ. ಹಿಂದೆಲ್ಲ ಸಮ್ಮೇಳನಗಳಲ್ಲಿ ಇಂಥವು ನಡೆದಿವೆ. ಟಿ.ಎ-ಡಿ.ಎ ಭತ್ಯೆಗಳಿಗಾಗಿ, ಹಾಜರಾತಿ ಪ್ರಮಾಣ ಪತ್ರ ಸ್ವೀಕರಿಸುವುದಕ್ಕಾಗಿಯೂ ಗಲಾಟೆಯಾಗಿ ಲಾಠಿ ಪ್ರಹಾರ ನಡೆದದ್ದು ಇದೆ. ಈ ಸಾರೆ ಇಂತಹ ಪ್ರಮಾದಗಳು ಆಗಿಲ್ಲ.
ವಿಶೇಷವಾಗಿ ಬಂದವರೆಲ್ಲ ಬದಲಾವಣೆ ಬಯಸಿ ಬಂದವರು. ಅಷ್ಟೇ ನಿಷ್ಕಳಂಕ-ನಿರ್ಭಾವುಕರಾದವರು.
ಮುಂದಿನ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಬೇಕು ಎನ್ನುವ ಪ್ರಸಂಗ ಬಂದಾಗ ಮಾತ್ರ ಅದೇ ಕಸಾಪ ಜ್ಞಾನಿಗಳಿಂದಲೇ ಕೂಗಾಟಗಳು; ಪ್ರತಿಷ್ಠೆಯ ಹಣಾಹಣಿ ನಡೆದವೇ ವಿನಾ ಜನರಿಂದಲ್ಲ. ಯಾವೊಬ್ಬ ಸಾಮಾನ್ಯ ಅಥವಾ ವೀಕ್ಷಕನಿಂದ ಅಥವಾ ಶ್ರೋತೃಗಳಿಂದ ಇದು ನಡೆಯಲಿಲ್ಲ.
ಈ ಮೂರೂ ವಿದ್ಯಮಾನಗಳು ಜನಶ್ರದ್ಧೆಯ ಮತ್ತು ಜನಸಾಮಾನ್ಯ ಬಯಸುವ, ತನ್ಮೂಲಕ ಜನಾಶಯದ ಪ್ರತೀಕವಷ್ಟೇ.