ಬಾಗಲಕೋಟೆ: ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಭಾರಿ ಪೈಪೋಟಿ ನಡೆದಿದ್ದು, ಹಾಲಿ ಶಾಸಕ ಸಿದ್ದು ಸವದಿವಯವರ ಶಿಷ್ಯ ರಾಜೇಂದ್ರ ಅಂಬಲಿ ಬಹಿರಂಗವಾಗಿ ಸೆಡ್ಡು ಹೊಡೆದಿರುವದೇ ತೀವ್ರ ತಲೇನೋವಾಗುವಲ್ಲಿ ಕಾರಣವಾಗಿದೆ.ಕಳೆದ ಮೂರು ವಿಧಾನಸಭಾ ಚುನಾವಣೆಗಳನ್ನು ಎದುರಿಸಿರುವ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯಿಂದ ಸಿದ್ದು ಸವದಿ ಜಯ ಸಾಧಿಸಿದ್ದರೆ, ಒಂದು ಬಾರಿ ಕಾಂಗ್ರೆಸ್‌ನಿಂದ ಉಮಾಶ್ರೀ ಗೆದ್ದಿದ್ದಾರೆ. ಹಿಂದೆಂದೂ ಕಾಣದಂತಹ ಬಂಡಾಯದ ಬೇಗುದಿ ಎರಡೂ ಪಕ್ಷಗಳಲ್ಲಿ ತೀವ್ರಗೊಂಡಿದ್ದು, ಇದೀಗ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು ರಾಜಧಾನಿಯಲ್ಲಿಯೇ ಬಿಡಾರ ಹೂಡಿದ್ದು, ಖಾಸಗಿ ಹೊಟೇಲ್ ಮುಂಭಾಗದಲ್ಲಿರುವ ಪಕ್ಷದ ವರಿಷ್ಠರ ಎದುರು ಬ್ಯಾನರ್ ಹಿಡಿದು ನೇಕಾರ ಸಮುದಾಯಕ್ಕೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ರಾಜೇಂದ್ರ ಅಂಬಲಿ, ಕ್ಷೇತ್ರದಲ್ಲಿನ ವಾಸ್ತವ ಅರಿತು ಈ ಬಾರಿ ಟಿಕೆಟ್ ನೀಡಬೇಕು. ಶೇ. 40ರಷ್ಟು ನೇಕಾರ ಸಮುದಾಯವನ್ನೇ ಹೊಂದಿರುವ ತೇರದಾಳದಲ್ಲಿ ಬಹುದಿನಗಳ ಬೇಡಿಕೆಯಾಗಿರುವುದನ್ನು ಪಕ್ಷವು ಈಡೇರಿಸಬೇಕು. ಪಕ್ಷ ಗೆಲ್ಲಬೇಕಾದರೆ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಿದರೆ ಮಾತ್ರ ಗೆಲುವು ಸಾದ್ಯ ಎಂದರು.