ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಪ್ರಚಾರ ಮಾಡಲು ಎಲ್ಲರಿಗೂ ಬರುತ್ತದೆ. ಆದರೆ, ಜನರು ನಂಬಬೇಕಲ್ಲ. ಕಾಂಗ್ರೆಸ್ ಪಕ್ಷದವರೇ ಪರಮ ಭ್ರಷ್ಟರು. ಅವರು ಏನು ಮಾಡಿದರೂ ಜನರು ನಂಬುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ರಾಷ್ಟ್ರೀಯ ಮತ್ತು ದೊಡ್ಡ ಪಕ್ಷವಾಗಿ ಇವತ್ತು ಕಾಂಗ್ರೆಸ್ ಪಕ್ಷ ಉಳಿದಿಲ್ಲ. ಅದು ತನ್ನ ಜವಾಬ್ದಾರಿಯನ್ನೂ ಕಳೆದುಕೊಂಡಿದೆ. ಭ್ರಷ್ಟಾಚಾರದ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದೆ. ಯಾರೊ ಒಬ್ಬ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದರು ಎಂಬುದನ್ನೇ ಹಿಡಿದುಕೊಂಡು ಆರೋಪ ಮಾಡುತ್ತಿದೆ. ಹಾಗಾದರೆ ಒಂದು ಜವಾಬ್ದಾರಿಯುತ ಪಕ್ಷವಾಗಿ ಕಾಂಗ್ರೆಸ್ ಪಾತ್ರವೇನು ಎಂದು ಪ್ರಶ್ನಿಸಿದರು.
ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಕುಟುಂಬಗಳು ಅಧಿಕಾರದಲ್ಲಿದ್ದಾಗ ಮೂರು ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆದಿದ್ದೇವೆ. ಹೀಗಾಗಿ, ಗಾಂಧಿ ಕುಟುಂಬದ ರಕ್ಷಣೆಗೆ ಎಲ್ಲರೂ ನಿಲ್ಲಬೇಕು ಎಂದು ಆ ಪಕ್ಷದ ಜವಾಬ್ದಾರಿಯುತ ನಾಯಕ ರಮೇಶ್ ಕುಮಾರ್ ಅವರೇ ಬಹಿರಂಗ ಕರೆಯನ್ನು ಈಚೆಗೆ ನೀಡಿದ್ದರು ಎಂದು ಟೀಕಿಸಿದರು.