ಬೆಂಗಳೂರು : ನಗರದ ನಾಗವಾರ ಪ್ರದೇಶದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಉರುಳಿ, ತಾಯಿ ಹಾಗೂ ಮಗ ಸಾವಿಗೀಡಾದ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿತ್ತು. ಆರಂಭದಲ್ಲಿ ಯಾವುದೇ ಪ್ರಾಣಾಪಾಯವಿಲ್ಲ ಎಂದು ಹೇಳಲಾಗಿತ್ತಾದರೂ, ಪಿಲ್ಲರ್ ಬೈಕ್ನ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದರು. ಇದರಲ್ಲಿ ತಾಯಿ ಹಾಗೂ ಮಗ ಸಾವು ಕಂಡಿದ್ದರೆ, ತಂದೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. 35 ವರ್ಷದ ತಾಯಿ ತೇಜಸ್ವಿನಿಹಾಗೂ ಎರಡೂವರೆ ವರ್ಷದ ಮಗ ವಿಹಾನ್ ಮೃತಪಟ್ಟ ವ್ಯಕ್ತಿಗಳು. ಕೆಆರ್ ಪುರಂನಿಂದ ಹೆಬ್ಬಾಳಕ್ಕೆ ಬೈಕ್ನಲ್ಲಿ ದಂಪತಿಗಳು ತೆರಳುತ್ತಿದ್ದ ವೇಳೆ ಬೈಕ್ನ ಮೇಲೆ ಪಿಲ್ಲರ್ ರಾಡ್ಗಳು ಕುಸಿದಿವೆ. ಬೆಂಗಳೂರಿನ ನಾಗವಾರ ಬಳಿ ಮೆಟ್ರೋ ಪಿಲ್ಲರ್ಗಾಗಿ ಕಬ್ಬಿಣದ ರಾಡ್ಗಳನ್ನು ನಿಲ್ಲಿಸಲಾಗಿತ್ತು. ಸಿಲ್ಕ್ ಬೋರ್ಡ್ನಿಂದ ಏರ್ಪೋರ್ಟ್ ವರೆಗಿನ ನಿರ್ಮಾಣ ಹಂತದ ಮೆಟ್ರೋ ಮಾರ್ಗದಲ್ಲಿ ಈ ಅವಗಢ ಸಂಭವಿಸಿದೆ.