ನನಗೆ ಪರಿಚಿತರೊಬ್ಬರು ಬೆಂಗಳೂರಿನಲ್ಲಿ ಒಂದು ಪುಟ್ಟ ಶಾಲೆಯನ್ನು ಪ್ರಾರಂಭಿಸಿದರು. ಅವರಿಗೆ ಹೆಚ್ಚಿನ ಹಣಕಾಸಿನ ಬೆಂಬಲವಿಲ್ಲದ್ದರಿಂದ ಕಟ್ಟಡದ ಕೆಲಸ ತುಂಬ ನಿಧಾನವಾಗಿ ನಡೆಯುತ್ತಿತ್ತು. ಅಂತೂ ಎರಡು ವರ್ಷಗಳ ಪರಿಶ್ರಮದ ನಂತರ ಶಾಲೆ ಪ್ರಾರಂಭವಾಗುವ ಹಂತ ಬಂದಿತು. ನನ್ನ ಸ್ನೇಹಿತರಿಗೆ ಒಂದು ಹಿರಿಯಾಸೆ. ಬರೋಡಾದಿಂದ ಯೋಗಿ ಡಿವೈನ್ ಸೊಸೈಟಿಯ ಅಧ್ಯಕ್ಷರಾದ ಪರಮಪೂಜ್ಯ ಹರಿಪ್ರಸಾದ ಸ್ವಾಮೀಜಿಯವರನ್ನು ಶಾಲೆಯ ಉದ್ಘಾಟನೆಗೆ ಕರೆಯಿಸಬೇಕು. ಅಷ್ಟು ಸಣ್ಣ ಕಾರ್ಯಕ್ರಮಕ್ಕೆ ಸ್ವಾಮೀಜಿ ಅಲ್ಲಿಂದ ಇಲ್ಲಿಯವರೆಗೆ ಬಂದಾರೆಯೆ? ಅವರು ಬರಲೊಪ್ಪಿದರೂ ಅವರ ಪ್ರಯಾಣದ, ಮತ್ತಿತ್ತರ ಖರ್ಚುಗಳನ್ನು ನಿಭಾಯಿಸುವ ಶಕ್ತಿ ಅವರಿಗಿದೆಯೆ? ಆಸೆಯೇನೋ ದೊಡ್ಡದು ಆದರೆ ಅದನ್ನು ಪೂರೈಸಿಕೊಳ್ಳಲು ಸಾಮರ್ಥ್ಯ ಬೇಕಲ್ಲ. ಸ್ವಾಮೀಜಿ ಬರುವುದೆಂದರೆ ಕೇವಲ ಒಬ್ಬ ವ್ಯಕ್ತಿ ಬರುವುದಲ್ಲ. ಅವರನ್ನು ನಿಭಾಯಿಸುವುದು ಕಷ್ಟಸಾಧ್ಯವಾದದ್ದು. ಯಾಕೆಂದರೆ ಆ ಸಂಪ್ರದಾಯದ ಸ್ವಾಮಿಗಳು ಎಂದಿಗೂ ಒಬ್ಬರೇ ಪ್ರವಾಸ ಮಾಡುವಂತಿಲ್ಲ. ಅದರಲ್ಲೂ ಇವರು ಅಧ್ಯಕ್ಷರಾದ್ದರಿಂದ ಇವರೊಂದಿಗೆ ಕನಿಷ್ಠ ಮೂರು ನಾಲ್ಕು ಸ್ವಾಮಿಗಳಿರುತ್ತಾರೆ. ಅವರಿಗೆಲ್ಲ ವಿಮಾನದ ಟಿಕೆಟ್ಟಿನ ವ್ಯವಸ್ಥೆಯಾಗಬೇಕು. ಅವರು ಇಳಿದುಕೊಳ್ಳುವುದಕ್ಕೆ ಒಂದು ಮನೆಯೇ ಬೇಕು. ಅವರ ಊಟ ಉಪಚಾರಕ್ಕಾಗಿ ಒಂದು ತಂಡವೇ ಬರುತ್ತಿತ್ತು. ಅಡುಗೆಯವರು, ಸ್ವಾಮೀಜಿಗೆ ಪೂಜೆ, ಸಮಾರಂಭಗಳಿಗೆ ಸಹಾಯ ಮಾಡುವವರು ಎಲ್ಲರೂ ಬರಬೇಕಿತ್ತು. ಅವರೆಲ್ಲ ಸಾಧುಗಳೇ. ಅವರು ಯಾರೂ ಹೆಣ್ಣುಮಕ್ಕಳನ್ನು ಮಾತನಾಡಿಸುವುದಿರಲಿ, ನೋಡಲೂ ಸಾಧ್ಯವಿಲ್ಲ. ಹೀಗಾಗಿ ಸ್ವಾಮೀಜಿಯವರ ವಾಸ್ತವ್ಯವೆಂದರೆ ಅಲ್ಲಿ ಹತ್ತಿರವೂ ಮಹಿಳೆಯರು ಬರುವಂತಿಲ್ಲ.
ನನ್ನ ಸ್ನೇಹಿತರು ಅದಾವ ಧೈರ್ಯದಿಂದಲೋ ಅದನ್ನೆಲ್ಲ ಮಾಡುತ್ತೇನೆ ಎಂದು ಒಪ್ಪಿಕೊಂಡರು. ಇವರೇನೋ ತಯಾರಾದರು, ಆದರೆ ಇಂಥ ಸಣ್ಣ ಕಾರ್ಯಕ್ರಮಕ್ಕೆ ದೂರದ ಬೆಂಗಳೂರಿಗೆ ಬರಲು ಸ್ವಾಮೀಜಿ ಒಪ್ಪಿಕೊಂಡಾರೆಯೆ? ಹಾಗೆ ಸ್ವಾಮೀಜಿಯವರನ್ನು ಒಪ್ಪಿಸುವ ಕೆಲಸವನ್ನು ಸ್ನೇಹಿತರು ನನ್ನ ತಲೆಯ ಮೇಲೆಯೇ ಹಾಕಿದರು. ಮುಂದೆ ಹದಿನೈದು ದಿನಗಳಲ್ಲೇ ಬರೋಡಾಕ್ಕೆ ಹೋಗುವ ಅವಕಾಶ ಬಂದಿತು. ಸ್ವಾಮೀಜಿಯವರ ಮುಂದೆ ಈ ವಿಷಯವನ್ನು ಪ್ರಸ್ತಾಪ ಮಾಡಿದೆ. ಇದೊಂದು ತೀರಾ ಚಿಕ್ಕದಾದ ಕಾರ್ಯಕ್ರಮ, ಅದೊಂದು ಪುಟ್ಟ ಶಾಲೆಯ ಉದ್ಘಾಟನೆ ಎಂದು ವಿಷಯವನ್ನು ಸ್ಪಷ್ಟ ಪಡಿಸಿದೆ. ಯಾಕೆಂದರೆ, ಬೆಂಗಳೂರಿಗೆ ಬಂದ ಮೇಲೆ ಇದೆಂಥ ಕಾರ್ಯಕ್ರಮ ಎಂದು ಬೇಜಾರು ಮಾಡಿಕೊಳ್ಳಬಾರದಲ್ಲ, ಎಲ್ಲವನ್ನೂ ಶಾಂತವಾಗಿ ಅವರು ಕೇಳಿಸಿಕೊಂಡರು, ನಂತರ, “ನಿಮಗೆ ನಾನು ಅಲ್ಲಿಗೆ ಬರುವ ಮನಸ್ಸಿದೆಯೇ?” ಎಂದು ಕೇಳಿದರು. ನಾನು, “ಹೌದು ಸ್ವಾಮಿ” ಎಂದೆ. ತಕ್ಷಣ ಅವರು, “ಅಚ್ಛಾ ಹಮ್ ಆ ಜಾಯೇಂಗೆ (ನಾವು ಬರುತ್ತೇವೆ)” ಎಂದುಬಿಟ್ಟರು! ಮತ್ತೆ ನಾನು, “ಸ್ವಾಮೀಜಿ, ಅದೊಂದು ತುಂಬ ಪುಟ್ಟ ಕಾರ್ಯಕ್ರಮ. ತಮ್ಮಂತಹವರನ್ನು ಅಲ್ಲಿಗೆ ಕರೆಯುವುದಕ್ಕೆ ನನಗೇ ಮುಜುಗರವಾಗುತ್ತಿದೆ” ಎಂದೆ. ಆಗ ಸ್ವಾಮೀಜಿ, “ಕಾರ್ಯಕ್ರಮ ಬಡಾ, ಛೋಟಾ ನಹೀ ಹೋತಾ. ಆಪ್ ಕಾ ದಿಲ್ ಬಡಾ ಹೈ. ಹಮ್ ಆ ಜಾಯೇಂಗೆ” (ಕಾರ್ಯಕ್ರಮ ದೊಡ್ಡದು, ಸಣ್ಣದು ಇರುವುದಿಲ್ಲ. ನಿಮ್ಮ ಹೃದಯ ದೊಡ್ಡದು. ನಾವು ಬರುತ್ತೇವೆ”) ಎಂದರು.
ನಂತರ ಕಾರ್ಯಕ್ರಮದ ದಿನಾಂಕ, ಬರುವ ವ್ಯವಸ್ಥೆ ಎಲ್ಲವೂ ತೀರ್ಮಾನವಾದವು. ಒಂದು ದಿನ ನಮ್ಮ ಮನೆಯಲ್ಲೇ ಸ್ವಾಮಿಗಳು ಇರುವುದು ಎಂದು ತೀರ್ಮಾನವಾಯಿತು. ಬೆಂಗಳೂರಿನಲ್ಲಿ ಅವರ ಶಿಷ್ಯವರ್ಗ ದೊಡ್ಡದು. ನೂರಾರು ಜನ ತುಂಬ ಶ್ರೀಮಂತರು ಅವರನ್ನು ತಮ್ಮ ತಮ್ಮ ಮನೆಗಳಿಗೆ ಕರೆದೊಯ್ಯಲು ಹವಣಿಸುತ್ತಿದ್ದರು. ಆದರೆ ಸ್ವಾಮೀಜಿ ಯಾರಿಗೂ ಒಪ್ಪದೆ, ನಮ್ಮ ಮನೆಯಲ್ಲೇ ಇರುವ ನಿರ್ಧಾರವನ್ನು ತಿಳಿಸಿದರು. ಸ್ವಾಮೀಜಿಯವರ ಪರಿವಾರ ಎರಡು ದಿನ ಮೊದಲೇ ಬಂದಿಳಿಯಿತು. ನಮ್ಮ ಮನೆಯನ್ನು ಅವರಿಗೆ ಒಪ್ಪಿಸಿಬಿಟ್ಟೆವು. ಅವರೆಲ್ಲ ಸೇರಿ ನಮ್ಮ ಮನೆಯನ್ನು ಪೂರ್ತಿ ಬದಲಾಯಿಸಿಯೇ ಬಿಟ್ಟರು. ಬಹುದೊಡ್ಡ ಸಮಸ್ಯೆಯೆಂದರೆ ನನ್ನ ತಾಯಿ ಮತ್ತು ಹೆಂಡತಿಯನ್ನು ಏನು ಮಾಡುವುದು? ಅವರಿಬ್ಬರೂ ಒಂದು ಕೊಠಡಿಯಲ್ಲಿ ಬಂಧಿಯಾಗಿಬಿಟ್ಟರು! ಅವರು ಜೋರಾಗಿ ಮಾತನಾಡುವಂತೆಯೇ ಇಲ್ಲ. ನಮ್ಮ ಅಡುಗೆ ಮನೆ ಆನಂದಸ್ವಾಮಿಯ (ಸ್ವಾಮೀಜಿಯವರ ವೈಯಕ್ತಿಕ ಅಡುಗೆಯವರು, ಅವರೂ ಸಾಧುವೇ) ಆಡಳಿತಕ್ಕೆ ಸೇರಿ ಹೋಯಿತು. ಯಾವು ಯಾವುದೋ ಗುಜರಾತೀ ತಿಂಡಿ, ಪದಾರ್ಥಗಳ ತಯಾರಿ ಶುರುವಾಯಿತು. ಮಹಡಿಯ ಮೇಲೆ ಇದ್ದ ಏಕೈಕ ಕೋಣೆಯನ್ನು ಸ್ವಾಮೀಜಿಯವರ ವಾಸಕ್ಕಾಗಿ ಸಜ್ಜುಗೊಳಿಸಿದೆವು. ಅದನ್ನೂ ಅವರ ಶಿಷ್ಯ ಸನ್ಯಾಸಿಗಳೇ ಸಂಪೂರ್ಣವಾಗಿ ಬದಲಾಯಿಸಿ, ಗುರುಗಳಿಗೆ ಒಪ್ಪಿತವಾಗುವಂತೆ ಮಾಡಿದರು. ಸ್ವಾಮೀಜಿ ಬಂದರು. ಅವರನ್ನು ವಿಮಾನ ನಿಲ್ದಾಣದಲ್ಲಿ ಎದುರುಗೊಂಡು ನೇರವಾಗಿ ಶಾಲೆಯ ಆವರಣಕ್ಕೆ ಹೋದೆವು. ಹಿಂದಿನ ದಿನ ಜೋರು ಮಳೆಯಾಗಿತ್ತು. ಆದ್ದರಿಂದ ಎಲ್ಲೆಲ್ಲಿಯೂ ನೀರು ನಿಂತುಕೊಂಡಿತ್ತು. ನಾಲ್ಕಾರು ಜನ ಕೆಲಸಗಾರರು ನೀರನ್ನು ಹೊರಗೆ ತಳ್ಳಿ, ಹಾಕಿದ್ದ ಶಾಮಿಯಾನವನ್ನು ಸರಿಮಾಡಿ, ವೇದಿಕೆಯನ್ನು ಸಜ್ಜು ಮಾಡುತ್ತಿದ್ದರು. ಕಾರ್ಯಕ್ರಮಕ್ಕೆ ಇಪ್ಪತ್ತು ಜನ ಶ್ರೋತೃಗಳೂ ಇರಲಿಲ್ಲ. ಸ್ವಾಮೀಜಿಯವರನ್ನು ಒಂದು ಕೋಣೆಯಲ್ಲಿ ಕೂಡ್ರಿಸಿ ಅವರೊಂದಿಗೆ ಒಂದಿಬ್ಬರು ಭಕ್ತರನ್ನು ಬಿಟ್ಟೆವು. ಕಾರ್ಯಕ್ರಮದ ಸಮಯ ಮೀರಿ ಅರ್ಧಗಂಟೆ ಹೆಚ್ಚಾದರೂ, ಶಾಲೆಯ ನೌಕರರೂ ಸೇರಿ ಒಂದು ಐವತ್ತು ಜನ ಆಗಿರಬಹುದು. ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ನನಗೋ ಮುಜುಗರ. ಬೇರೆ ಬೇರೆ ಕಡೆಗಳಲ್ಲಿ ಅವರ ಪ್ರವಚನವನ್ನು ಕೇಳಲು ಲಕ್ಷಾಂತರ ಜನ ಸೇರುವುದನ್ನು ಕಂಡಿದ್ದ ನನಗೆ ಸ್ವಾಮಿಗಳು ಏನೆಂದುಕೊಳ್ಳುತ್ತಾರೋ ಎಂಬ ಚಿಂತೆ. ಅದರೆ ದೊಡ್ಡವರ ರೀತಿಯೇ ಬೇರೆ. ಅವರ ಮುಖದಲ್ಲಿ ಅತಂಕದ, ಬೇಸರದ ಒಂದು ಗೆರೆಯೂ ಕಾಣಲಿಲ್ಲ. ಲಕ್ಷ ಜನ ಮುಂದೆ ಇದ್ದರೆ ಯಾವ ತನ್ಮಯತೆಯಿಂದ ಮಾತ ನಾಡುತ್ತಿದ್ದರೋ ಅದೇ ತನ್ಮಯತೆಯಿಂದ, ಪ್ರೀತಿಯಿಂದ ಮಾತನಾಡಿ, ನಮ್ಮ ಸಂಕೋಚವನ್ನೆಲ್ಲ ತೆಗೆದು ಹಾಕಿದರು.
ಆನಂತರ ವಿಶ್ರಾಂತಿಗೆಂದು ನಮ್ಮ ಮನೆಯ ಮಹಡಿಯ ಮೇಲಿನ ಕೋಣೆಗೆ ಹೋದರು. ಅತ್ಯಂತ ವೈಭವೋಪೇತವಾದ, ಸಕಲ ಸೌಕರ್ಯಗಳಿದ್ದ ಮನೆಗಳಲ್ಲಿ ಇದ್ದ ಸ್ವಾಮಿಗಳು ನಮ್ಮ ಪುಟ್ಟ ಕೋಣೆಯಲ್ಲಿ ಆರಾಮವಾಗಿರಬಹುದೇ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಸಾಮಾನ್ಯವಾಗಿ ಅವರು ವಿಶ್ರಾಂತಿ ತೆಗೆದುಕೊಳ್ಳುವುದು ಅರ್ಧಗಂಟೆ ಅಥವಾ ಮುಕ್ಕಾಲು ಗಂಟೆ. ಆದರೆ ಸುಮಾರು ಒಂದೂವರೆ ಗಂಟೆಗೆ ವಿಶ್ರಾಂತಿಗೆ ತೆರಳಿ ದವರು, ನಾಲ್ಕು ಗಂಟೆಯಾದರೂ ಹೊರಗೆ ಬರಲಿಲ್ಲ. ಶಿಷ್ಯರಿಗೆ ಕಾಳಜಿ. ಬಾಗಿಲು ತಟ್ಟಿ ಎಬ್ಬಿಸುವಂತಿಲ್ಲ. ನಾಲ್ಕು ಕಾಲಿಗೆ ಸ್ವಾಮೀಜಿ ಹೊರಗೆ ಬಂದರು. ಮುಖ ಪ್ರಸನ್ನವಾಗಿತ್ತು. ಕೆಳಗೆ ಇಳಿದು ಬಂದು, ನನ್ನ ಹೆಗಲ ಮೇಲೆ ಕೈಯಿಟ್ಟು, “ಕರಜಗಿ ಸಾಹೇಬ, ನಿಮ್ಮ ಮನೆಯಲ್ಲಿ ಏನೋ ವಿಶೇಷ ಇದೆ. ನಾನು ಬಾಲ್ಯದಲ್ಲಿ ಹೇಗೆ ನಿರಾಳವಾಗಿ ಮಲಗಿ ನಿದ್ರೆ ಮಾಡುತ್ತಿದ್ದೆನೋ ಅದೇ ತರಹ ಮಗುವಿನಂತೆ ಮಲಗಿ ಬಿಟ್ಟೆ. ತುಂಬ ಸಂತೋಷವಾಯಿತು” ಎಂದರು. ಇದು ನಿಜವಾದ ಸಂತತ್ವ. ಅವರ ಸುತ್ತಮುತ್ತ ವೈಭವ, ಶ್ರೀಮಂತಿಕೆ, ಸಂಭ್ರಮಗಳಿದ್ದವು ಆದರೆ ಅವು ಅವರಲ್ಲಿ ಇಳಿದಿರಲಿಲ್ಲ. ಅವರಿಗೆ ವೈಭವ ಮತ್ತು ಸರಳತೆ ಎರಡೂ ಒಂದೇ. ಅವರು ಯಾವುದಕ್ಕೂ ಅಂಟದವರು, ಎರಡೂ ಕಡೆಗೆ ಅಷ್ಟೇ ಸಹಜವಾಗಿ ಇದ್ದು ಬಿಡುವವರು.
ಅವರು ಬರುತ್ತಾರೆಂದು ಮೊದಲೇ ಗೊತ್ತಿದ್ದರಿಂದ, ಅಂದು ಸಾಯಂಕಾಲ ಒಂದು ಒಳ್ಳೆಯ ಕಾರ್ಯಕ್ರಮ ಆಯೋಜಿಸ ಬೇಕೆಂದು ತೀರ್ಮಾನಿಸಿದ್ದೆ. ಅಂದು ಬೆಂಗಳೂರಿನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಎತ್ತರದಲ್ಲಿದ್ದವರನ್ನು ಮನೆಗೆ ಕರೆದು ಸ್ವಾಮೀಜಿಯವರೊಂದಿಗೆ ಸಂವಾದವನ್ನು ಏರ್ಪಡಿಸಲು ವ್ಯವಸ್ಥೆ ಮಾಡಿದ್ದೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಪೋಲೀಸ್ ವರಿಷ್ಠರು, ನಿವೃತ್ತ ಸುಪ್ರೀಂ ಕೋರ್ಟ ನ್ಯಾಯಾಧೀಶರು, ಚಲನಚಿತ್ರ ಸಂಗೀತ ನಿರ್ದೇಶಕರು, ದೊಡ್ಡ ಕಂಪನಿಯ ಮುಖ್ಯಸ್ಥರು, ಕೃಷಿ ಪರಿಣಿತರು ಹೀಗೆ ಸುಮಾರು ಹದಿನೈದು ಜನರನ್ನು ಆಮಂತ್ರಿಸಿದ್ದೆ. ಅವರೆಲ್ಲ ಬರುವುದಾಗಿ ಮಾತು ಕೊಟ್ಟಿದ್ದರು. ಮನೆಯ ಮಾಳಿಗೆಯ ಮೇಲೆ ಒಂದು ಸುಂದರ ಶಾಮಿಯಾನಾ ಹಾಕಿಸಿ, ಗುರುಗಳಿಗೆ ವಿಶೇಷ ಆಸನ ಮತ್ತು ಉಳಿದವರಿಗೆಲ್ಲ ಸುಖಕರ ಆಸನಗಳನ್ನು ಹಾಕಿಸಿ, ಲೈಟ್ ಮತ್ತು ಮೈಕ್ ವ್ಯವಸ್ಥೆ ಮಾಡಿದ್ದೆ. ಕಾರ್ಯಕ್ರಮ ಸಂಜೆ ಆರೂವರೆಗೆ ಎಂದು ನಿರ್ಧಾರವಾಗಿತ್ತು. ಆದರೆ ಐದೂವರೆಗೆ ಮಳೆ ಶುರುವಾಯಿತು. ಅದು ಮಳೆಯೇ? ಕುಂಭದ್ರೋಣ. ಅದರೊಂದಿಗೆ ಬಿರುಗಾಳಿ. ಶಾಮಿ ಯಾನಾ ಕುಸಿಯಿತು. ಕುರ್ಚಿಗಳು ನೆನೆದವು. ಈಗೇನು ಮಾಡುವುದು? ಮನೆಯ ಹಾಲ್ನಲ್ಲಿಯ ಪೀಠೋಪಕರಣಗಳನ್ನೆಲ್ಲ ತೆಗೆದು, ಗುರುಗಳಿಗೆ ಮಾತ್ರ ಒಂದು ಕುರ್ಚಿಯನ್ನಿಟ್ಟು, ಉಳಿದವರಿಗೆ ಜಮಖಾನೆಯೇ ಗತಿ. ಎಲ್ಲರೂ ಕೆಳಗೇ ಕುಳಿತು, ಗುರುಗಳ ಮಾತು ಕೇಳಿ, ಸಂವಾದ ಮಾಡಿದರು. ನಾನು ತುಂಬ ಮುಜುಗರದಿಂದ, “ಸ್ವಾಮೀಜಿ, ಮಳೆಯಿಂದ ಈ ಅವ್ಯವಸ್ಥೆಯಾಯಿತು, ಕ್ಷಮಿಸಿ” ಎಂದೆ. ಅವರು ಎಂದಿನಂತೆ ಮುಗುಳ್ನಗೆ ನಕ್ಕು,| “ಕರಜಗಿ ಸಾಹೇಬ, ಹೀಗೆ ಆದದ್ದು ತುಂಬ ಒಳ್ಳೆಯದೇ ಆಯಿತು. ಆತ್ಮೀಯತೆ ಹೆಚ್ಚಾಯಿತು. ಮಾಳಿಗೆಯ ಮೇಲೆ ಆಗಿದ್ದರೆ ದೂರ ದೂರ ಕುಳಿತುಕೊಳ್ಳುತ್ತಿದ್ದೆವು. ಈಗ ನೋಡಿ ಎಲ್ಲರೂ ಒಂದೇ ಕಡೆಗೆ ಹತ್ತಿರ ಹತ್ತಿರವಾಗಿ ಕುಳಿತು ಮಾತನಾಡಿದ್ದೇವೆ” ಎಂದರು!
ಅವರಿಗೆ ಯಾವುದೂ ಅನಾನುಕೂಲವಲ್ಲ, ಕಷ್ಟವಲ್ಲ. ಪ್ರೇಮವೊಂದಿದ್ದರೆ ಸಾಕು, ಮತ್ತೇನೂ ಬೇಕಿಲ್ಲ. ಅವರ ಬದುಕಿನ ಸಂದೇಶವೇ ಪ್ರೇಮ. ಅಲ್ಲಿ ಜಾತಿ, ಮತಗಳ, ಶ್ರೀಮಂತಿಕೆ, ಬಡತನಗಳ ಭಿನ್ನತೆಯೇ ಇಲ್ಲ. ಅದೇ ನಿಜವಾದ ಸಂತತ್ವ ಎನ್ನಿಸಿತು.