ನಿಗಮ ಮಂಡಳಿ: ಹೈಕಮಾಂಡ್ ತೀರ್ಮಾನ ಅಂತಿಮ

Advertisement

ಹಾವೇರಿ: ನಿಗಮ ಮಂಡಳಿ ಆಯ್ಕೆ ಕುರಿತು ಚರ್ಚೆ ಮಾಡಿ ಮೊದಲ ಹಂತದಲ್ಲಿ ಶಾಸಕರನ್ನು ಆಯ್ಕೆ ಮಾಡುತ್ತೇವೆ. ನಾನು, ಸುರ್ಜೆವಾಲಾ, ಡಿ.ಕೆ.ಶಿವಕುಮಾರ ಕುಳಿತು ಚರ್ಚೆ ಮಾಡುತ್ತೇವೆ. ಹೈಕಮಾಂಡ್ ನವರು ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕಾಗಿನೆಲೆಯ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಶಾಸಕ‌ ಬಿ.ಆರ್.ಪಾಟೀಲ ರಾಜೀನಾಮೆ ಪತ್ರದ ಕುರಿತು ಈಗಾಗಲೇ ಬೆಳಗ್ಗೆ ದೂರವಾಣಿ ಮೂಲಕ ಅವರೊಂದಿಗೆ ಮಾತನಾಡಿದ್ದೇನೆ. ಸಂಜೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ಅಲ್ಲಿ ಚರ್ಚಿಸುತ್ತೇನೆ.

ಹೈಕೋರ್ಟ್ ನಲ್ಲಿ ಡಿ.ಕೆ.ಶಿವಕುಮಾರಗೆ ರಿಲೀಫ್ ಕುರಿತು ಮಾತನಾಡಿದ‌ ಸಿಎಂ, ಸಿಬಿಐ ತನಿಖೆ ಮಾಡಬೇಕು ಎಂಬುದನ್ನು ನಾವು ವಾಪಸ್ ತೆಗೆದುಕೊಂಡಿದ್ದೇವೆ. ಅದು ಕಾನೂನು ಪ್ರಕಾರ ಇಲ್ಲ. ಈ ಹಿಂದಿನ ಸರ್ಕಾರ ಕಾನೂನು ಬಾಹಿರವಾಗಿ ಮಾಡಿತ್ತು.

ಬರಗಾಲದ ಪರಿಹಾರ ಕುರಿತು ಸಮೀಕ್ಷೆ ಮಾಡುತ್ತಿದ್ದೇವೆ. ಎನ್ ಡಿ ಆರ್ ಎಫ್ ಪ್ರಕಾರ ಪರಿಹಾರ ಕೊಡುತ್ತೇವೆ. ಆದರೆ, ಕೇಂದ್ರ ಸರ್ಕಾರ ಒಂದು ನಯಾಪೈಸೆ ಕೊಡುತ್ತಿಲ್ಲ.
ರೈತರು ಕಷ್ಟದಲ್ಲಿ ಇದ್ದಾರೆ ಪಾಪ ಪರಿಹಾರ ಕೇಳುತ್ತಿದ್ದಾರೆ. ನಮ್ಮ ತೆರಿಗೆ ಹಣ ನಮಗರ ಕೊಡಲು ಕೇಂದ್ರ ಒಪ್ಪುತ್ತಿಲ್ಲ.

ನಾವು ಕುಡಿಯುವ ನೀರಿಗೆ, ಮೇವಿಗೆ ಹಣ ಕೊಟ್ಟಿದ್ದೇವೆ. ನಾವು ಏನೂ ಮಾಡದೇ ಕುಳಿತಿಲ್ಲ. ಜಿಲ್ಲಾಧಿಕಾರಿಗಳಿಗೆ, ಮಂತ್ರಿಗಳಿಗೆ ಸೂಚನೆ ಕೊಟ್ಟಿದ್ದೇನೆ.

ಬರಗಾಲದ ಬಗ್ಗೆ ಮಿಟಿಂಗ್ ಮಾಡಬೇಕು. ಯಾರಿಗೂ ತೊಂದರೆ ಆಗಬಾರದು, ಸಮೀಕ್ಷೆ ಮಾಡಬೇಕು.

ಜನಗಳಿಗೆ ಬರಗಾಲದಲ್ಲಿ ನರೇಗಾ ಯೋಜನೆಯಡಿ ನೂರು ದಿನದ ಬದಲು 150 ದಿನ ಕೆಲಸ ಕೊಡಬೇಕು ಎಂಬ ನಿಯಮವಿದೆ. ಆದರೆ, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕೊಡುತ್ತಿಲ್ಲ.

ಇಡೀ ದೇಶದಲ್ಲಿ ಹನ್ನೆರಡು ರಾಜ್ಯದಲ್ಲಿ ಬರಗಾಲ ಇದೆ. ಯಾವ ರಾಜ್ಯಕ್ಕೂ ಪರಿಹಾರ ಹಾಗೂ ಅನುಮತಿ ಕೊಟ್ಟಿಲ್ಲ.

ಕೇಂದ್ರದಿಂದ ಬರಗಾಲ ತಂಡ ಅಧ್ಯಯನ ಮಾಡಿ ವರದಿ ಕೊಟ್ಟಿದೆ. ಆದರೂ ಪರಿಹಾರ ಕೊಟ್ಟಿಲ್ಲ.

ಇಲ್ಲಿಯ ಬಿಜೆಪಿಯವರು ಹೇಳುತ್ತಾರೆ. ಅವರಿಗೆ ಯಾಕೆ ನೋಡುತ್ತೀರಿ ಅಂತಾ. ಆದರೆ ನಾವು ಆ ಕಡೆ ನೋಡುವುದಿಲ್ಲ. ನಮಗೆ ಬರಬೇಕಾಗಿರುವ ಪರಿಹಾರ ಬರಬೇಕಲ್ಲ‌ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗೆಗಿನ ವಿಚಾರ, ವಿರೋಧ ಪಕ್ಷದವರು ಏನು ಪ್ರಸ್ತಾಪ ಮಾಡುತ್ತಾರೆ. ಅದಕ್ಕೆ ನಾವು ಉತ್ತರ ಕೊಡುವುದಕ್ಕೆ ತಯಾರಿದ್ದೇವೆ.

ಉತ್ತರ ಕರ್ನಾಟಕ ಭಾಗದ ಸಮಸ್ಯೆ ಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತೇವೆ.

ಸಿಎಂ ವಕೀಲರಾಗಿ ಡಿಕೆಶಿ ಕೇಸ್ ವಾಪಸ್ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಎಚ್ ಡಿಕೆ ಹೇಳಿಕೆ ಕುರಿತು ಸಿಎಂ ಪ್ರತಿಕ್ರಿಯಿಸಿದರು. ನಾವು ವಕೀಲರಾಗಿ ಇರೋದಕ್ಕೆ ವಾಪಸ್ ಪಡೆದಿದ್ದೇವೆ. ಅವರು ವಕೀಲರು ಅಲ್ಲ. ಕಾನೂನು ಪ್ರಕಾರ ಇಲ್ಲ ಎಂಬ ಕಾರಣಕ್ಕೆ ವಾಪಸ್ ಪಡೆದಿದ್ದೇವೆ.

ವಕೀಲರಾಗಿ ಇರುವುದಕ್ಕೆ ವಾಪಸ್ ಪಡೆದಿದ್ದೇವೆ. ಇಲ್ಲ ಎಂದರೆ ಯಡಿಯೂರಪ್ಪನ ಥರ, ಕುಮಾರಸ್ವಾಮಿ ರೀತಿಯಲ್ಲಿ ನಾನೂ ಇರುತ್ತಿದ್ದೆ ಎಂದು ಕುಟುಕಿದರು.