ನವದೆಹಲಿ: ಭಾರತ ಸರ್ಕಾರ ಇಂದು ಕೋವಿಡ್ -19 ನ ನಾಸಲ್ ಲಸಿಕೆ ಬಳಕೆಯನ್ನು ಅನುಮೋದಿಸಿದೆ. ಇದು ಭಿನ್ನರೂಪದ ಬೂಸ್ಟರ್ ಡೋಸ್ ಆಗಿ ಬಳಸಲ್ಪಡಲಿದೆ.
ವರದಿಗಳ ಪ್ರಕಾರ ಈ ಮೂಗಿನ ಮೂಲಕ ಬಿಡುವ ಲಸಿಕೆಯನ್ನು ಇಂದು ಕೋ-ವಿನ್ ಪೋರ್ಟಲ್‌ಗೆ ಸೇರಿಸುವ ನಿರೀಕ್ಷೆಯಿದೆ. ಕೊರೊನಾವೈರಸ್‌ಗೆ ನಾಸಲ್ ಲಸಿಕೆಯನ್ನು ಇಂದಿನಿಂದ ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಮತ್ತು ಇದು ಮೊದಲು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತದೆ ಎಂದು ವರದಿಗಳು ತಿಳಿಸಿವೆ. ಕೋವಿಡ್-19 ಗಾಗಿ ನಾಸಲ್ ಲಸಿಕೆ ಅನುಮೋದನೆಯನ್ನು ದೃಢೀಕರಿಸಿ ಪ್ರಸಾರ ಭಾರತಿ ಟ್ವಿಟ್ ಮಾಡಿದ್ದು, “ಭಾರತ್ ಬಯೋಟೆಕ್ ನಾಸಲ್ ಲಸಿಕೆ ಬಳಕೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಲಸಿಕೆ ಇಂದಿನಿಂದ ಕೋವಿನ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ನಾಸಲ್ ಲಸಿಕೆಗಳು ಪ್ರಸ್ತುತ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ” ಎಂದು ಹೇಳಿದೆ. ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ವಿಶೇಷವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಕ್ರಮಗಳನ್ನು ಪರೀಕ್ಷಿಸಲು ಮತ್ತು ಬಲಪಡಿಸಲು ಒತ್ತು ನೀಡುವಂತೆ ಸೂಚಿಸಿದರು. ಜನರು ಎಲ್ಲಾ ಸಮಯದಲ್ಲೂ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಎಂದು ಒತ್ತಿಹೇಳಿದರು, ಕೆಲವು ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ನಡುವೆ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಲೋಕಸಭೆ ಮತ್ತು ರಾಜ್ಯಸಭೆಗೆ ಸಂಭವನೀಯ ಸವಾಲುಗಳನ್ನು ಎದುರಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.