ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಬಂಟ್ವಾಳ ತಾಲೂಕಿನ ಬಾಳ್ತಿಲ ಎಂಬಲ್ಲಿ ನಡೆದಿದೆ.
ನೇಣಿಗೆ ಶರಣಾದ ವಿಧ್ಯಾರ್ಥಿನಿಯನ್ನು ಬಾಳ್ತಿಲ ಗ್ರಾಮ ಪಂಚಾಯತ್ ಬಳಿಯ ನಿವಾಸಿ ಶಿಕ್ಷಕ ದಂಪತಿಗಳಾದ ಚಂದ್ರಶೇಖರ್ ಗೌಡ ಮತ್ತು ಸೌಮ್ಯ ದಂಪತಿಗಳ ಪುತ್ರಿ ವೈಷ್ಣವಿ ಎಂದು ತಿಳಿದು ಬಂದಿದೆ. ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವೈಷ್ಣವಿ (17) ಸಾವನ್ನಪ್ಪಿದ ಬಾಲಕಿ. ಚಂದ್ರಶೇಖರ ಮತ್ತು ಸೌಮ್ಯಾ ಅವರ ಮೂವರು ಮಕ್ಕಳಲ್ಲಿ ಮೊದಲನೆಯವಳಾದ ವೈಷ್ಣವಿ ಬೆಳಗ್ಗೆ ಸುಮಾರು 10 ಗಂಟೆಯ ಆಸುಪಾಸಿನಲ್ಲಿ ಈ ಕೃತ್ಯವೆಸಗಿದ್ದಾಗಿ ಸಂಶಯಿಸಲಾಗಿದೆ. ದಿಢೀರನೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ವೈಷ್ಣವಿ, ಪಿಯುಸಿಯಲ್ಲಿ ಕಾಮರ್ಸ್ ಕಲಿಯುತ್ತಿದ್ದು, ಆಕೆಯ ಪರೀಕ್ಷೆ ನಾಳೆ ನಿಗದಿಯಾಗಿತ್ತು. ಪರೀಕ್ಷೆಯ ಸಿದ್ಧತೆಯಲ್ಲಿದ್ದ ವೈಷ್ಣವಿ ಬೆಳಗ್ಗೆ ತಾಯಿ ಜೊತೆ ಶಾಲೆಗೆ ಹೋಗಿ ಮರಳಿದ್ದಳು. ಎಂದಿನಂತೆ ತಾಯಿ ಮಗಳಿಗೆ ಕರೆ ಮಾಡಿದ್ದು, ಹಲವು ಕರೆಗಳಾದರೂ ಸ್ವೀಕರಿಸಿರಲಿಲ್ಲ. ಈ ವೇಳೆ ಪಕ್ಕದ ಮನೆಯವರು ಬಂದು ನೋಡಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.