ಹೊಸಪೇಟೆ: ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿ ಜಪ್ತಿ ಮಾಡಿದ ಹಣವನ್ನು ಹಿರಿಯ ಅಧಿಕಾರಿಗಳ ಮುಂದೆ ಹಾಜರುಪಡಿಸದ ನಾಲ್ವರು ಪೊಲೀಸ್ ಪೇದೆಗಳನ್ನು ಎಸ್ಪಿ ಡಾ.ಅರುಣ್ ಕೆ. ಅಮಾನತುಗೊಳಿಸಿ ಆದೇಶ ಹೊರಡಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಹೇಶ್, ಅಭೀಷೇಕ್, ಮಂಜುನಾಥ, ಶ್ರೀಕಾಂತ ಅಮಾನತುಗೊಂಡ ಪೊಲೀಸ್ ಪೇದೆಗಳು.
ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಛಲವಾದಿ ಕಾಲೋನಿಯಲ್ಲಿ ವೆಂಕಟೇಶ್ ಮತ್ತು ಆತನ ಸ್ನೇಹಿತರು ಇಸ್ಪೀಟ್ ಆಡುತ್ತಿದ್ದರು, ಈ ವೇಳೆ ದಾಳಿ ನಡೆಸಿದ ಪೊಲೀಸರು 20 ಸಾವಿರ ರೂ.ನಗದು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದರು. ಆದರೆ, ಈ ದಾಳಿ ಕುರಿತು ಹಿರಿಯ ಠಾಣೆಯ ಅಧಿಕಾರಿಗಳಿಗೆ ತಿಳಿಸಿರಲಿಲ್ಲ. ಜಪ್ತಿ ಮಾಡಿದ ಹಣ ಮತ್ತು ಮೊಬೈಲ್ ಹಾಜರುಪಡಿಸಿರಲಿಲ್ಲ.