ನಾಲ್ಕು ಗಂಟೆ ಕಾಯಿಸಿದ ಜನಪ್ರತಿನಿಧಿಗಳು – ಅಂಗವಿಕಲರ ಆಕ್ರೋಶ

Advertisement

ಕೋಲಾರ: ನಾಲ್ಕು ಗಂಟೆ ಕಾದರೂ ಅಂಗವಿಕಲರ ದಿನಾಚರಣೆ ಕಾರ್ಯಕ್ರಮಕ್ಕೆ ಯಾವೊಬ್ಬ ಜನಪ್ರತಿನಿಧಿ ಬಾರದ ಕಾರಣ ಅಂಗವಿಕಲರು ಹಾಗೂ ಅವರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆಯಿತು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ, ಅಂಗವಿಕಲರು ಸಮಯಕ್ಕೆ ಸರಿಯಾಗಿ ಬಂದು ಆಸೀನರಾಗಿದ್ದರು ಆದರೆ, ಮಧ್ಯಾಹ್ನ ಒಂದು ಗಂಟೆ ದಾಟಿದರೂ ಯಾವೊಬ್ಬ ಜನಪ್ರತಿನಿಧಿ ಕೂಡ ರಂಗಮಂದಿರದ ಕಡೆ ಸುಳಿಯಲಿಲ್ಲ. ಬೆಳಗ್ಗೆಯಿಂದ ಕಾರ್ಯಕ್ರಮದಲ್ಲಿ ಹಾಜರಿದ್ದು, ತಾಳ್ಮೆ ಕಳೆದುಕೊಂಡ ಅಂಗವಿಕಲರು ವೇದಿಕೆಯ ಮೇಲೆ ಗಲಾಟೆ ಮಾಡಲು ಪ್ರಾರಂಭಿಸಿದರು. ಕೊಂಚವೂ ಮಾನವೀಯತೆ ತೋರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಜನಬೆಂಬಲವೂ ವ್ಯಕ್ತವಾಯಿತು. ಕೊನೆಗೆ ಸಂಸದರು 1.40ಕ್ಕೆ ವೇದಿಕೆಗೆ ಬಂದರು. ʻನನಗೆ ಬೇರೊಂದು ಕಾರ್ಯಕ್ರಮ ಇದ್ದ ಕಾರಣ ಬರಲು ಸಾಧ್ಯವಿಲ್ಲವೆಂದು ನಾನು ಮೊದಲೇ ಹೇಳಿದ್ದೆ. ಇಲಾಖೆ ಉಪನಿರ್ದೇಶಕ ಮುದ್ದಣ್ಣ ಅವರು ಬರಲೇಬೇಕು ಎಂದಾಗ ಅನಿವಾರ್ಯವಾಗಿ ಬರಬೇಕಾಯಿತು’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಮುನಿಸ್ವಾಮಿ ಹೇಳಿದರು.