ನಾಮಪತ್ರ ಸಲ್ಲಿಕೆ: ಠೇವಣಿ ಹಣ ಎಣಿಸಲು ಸುಸ್ತಾದ ಅಧಿಕಾರಿಗಳು

Advertisement

ರಾಣೇಬೆನ್ನೂರ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಕೂಡಿಟ್ಟ ನಾಣ್ಯಗಳ ಮೂಲಕ ತಹಶೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಚುನಾವಣಾಧಿಕಾರಿ ಇಬ್ರಹಿಂ ದೊಡ್ಮನಿ ಅವರಿಗೆ ನಾಮಪತ್ರ ಸಲ್ಲಿಸಿ ಗಮನ ಸೆಳೆದರು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 10 ಸಾವಿರ ರೂ. ಠೇವಣೆ ಇಡಬೇಕು. ಈ ನಿಟ್ಟಿನಲ್ಲಿ ಹನುಮಂತಪ್ಪ ಕಬ್ಬಾರ ಚುನಾವಣೆಯಲ್ಲಿ ತಾವು ಕೂಡಿದ್ದ ಹಣದ ಮೂಲಕ ಠೇವಣೆ ಕಟ್ಟಿದ್ದಾರೆ. ನಗರದ ಕೆಇಬಿ ಗಣೇಶ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಮೆರವಣಿಗೆಯ ಮೂಲಕ, ಬಸ್ ನಿಲ್ದಾಣ, ಅಂಚೆ ವೃತ್ತ, ಎಂ.ಜಿ.ರಸ್ತೆ, ಕುರುಬಗೇರಿ ಕ್ರಾಸ್ ಮೂಲಕ ತಹಶೀಲ್ದಾರ್‌ ಕಚೇರಿಗೆ ತೆರಳಿ ಅಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿ ಕೊಟ್ಟ ಸಾವಿರಾರು ರೂ. ನಾಣ್ಯಗಳನ್ನು ಎಣಿಸಲು ಅಧಿಕಾರಿಗಳು ಸಿಬ್ಬಂದಿಗೆ ತಿಳಿಸಿ ಬಳಿಕ ಎಸ್‌ಬಿಐ ಬ್ಯಾಂಕ್‌ ಮೂಲಕ ಚಿಲ್ಲರೆ ಹಣವನ್ನು ನೋಟಿಗೆ ಬದಲಾಯಿಸಿ ಅಭ್ಯರ್ಥಿಗೆ ರಶೀದಿ ನೀಡಿದ್ದಾರೆ.