ಹುಬ್ಬಳ್ಳಿ : ಕಲಘಟಗಿ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ. ಇಲ್ಲಿ ಹೊರಗಿನವರಿಗೆ ಅವಕಾಶವಿಲ್ಲ. ನನಗೇನು ದೇವೇಗೌಡರು, ಶಾಮನೂರ ಶಿವಶಂಕರಪ್ಪ, ಹೊರಟ್ಟಿಯವರಷ್ಟು ವಯಸ್ಸಾಗಿಲ್ಲ. ವಯಸ್ಸಿನ ಕಾರಣ ನೀಡಿ ಪಕ್ಷ ನನಗೆ ಟಿಕೆಟ್ ತಪ್ಪಿಸಲ್ಲ ಎಂದಿದ್ದ ಕಲಘಟಗಿ ಹಾಲಿ ಶಾಸಕ ಸಿ.ಎಂ ನಿಂಬಣ್ಣವರಗೆ ಬಿಜೆಪಿ ಟಿಕೆಟ್ ಹಾರಿಸಿದೆ.
ಬದಲಾಗಿ ನಾಲ್ಕು ದಿನದ ಹಿಂದೆಯಷ್ಟೇ ಕಮಲ ಪಾಳಯ ಸೇರಿದ್ದ ಮಾಜಿ ಶಾಸಕ ನಾಗರಾಜ ಛಬ್ಬಿಯವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಕ್ಷೇತ್ರದಲ್ಲಿ 30 ಕ್ಕೂ ಹೆಚ್ಚು ವರ್ಷ ಪಕ್ಷದ ಏಳ್ಗೆಗೆ ಶ್ರಮಿಸಿ, ಹಲವು ಬಾರಿ ಸೋತರೂ ಬಿಜೆಪಿಯಿಂದಲೇ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಕಳೆದ ಬಾರಿ ಗೆಲುವು ಸಾಧಿಸಿದ್ದ ಶಾಸಕ ನಿಂಬಣ್ಣವರ ಗೆ ಶಾಕ್ ನೀಡಿದೆ.
ವಯಸ್ಸಾಗಿದೆ ನಿಮ್ಮ ಸೇವೆ ಪಕ್ಷಕ್ಕೆ ಸಾಕು ಎಂಬ ಸಂದೇಶವನ್ನು ಪಕ್ಷ ರವಾನಿಸಿದೆ.
ಹಾಗೆ ನೋಡಿದರೆ ಕಲಘಟಗಿ ಕ್ಷೇತ್ರಕ್ಕೆ ಕಳೆದ ಬಾರಿಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸ್ಪರ್ಧೆ ಮಾಡಲು ಪಕ್ಷ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ಕೊನೆಗಳಿಗೆಯಲ್ಲಿ ನಿಂಬಣ್ಣವರ ಅವರನ್ನು ಪಕ್ಷ ಕಣಕ್ಕಿಳಿಸಿತ್ತು.
ಇದಾದ ಬಳಿಕ 2023 ರ ಚುನಾವಣೆಗೆ ಟೆಂಗಿನಕಾಯಿ ಅವರಿಗೇ ಕಲಘಟಗಿ ಕ್ಷೇತ್ರಕ್ಕೆ ಟಿಕೆಟ್ ಫಿಕ್ಸ್ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೆ, ಬಿಜೆಪಿ ಹೈಕಮಾಂಡ್ ಬುಧವಾರ ರಾತ್ರಿ ಪ್ರಕಟಿಸಿದ ಎರಡನೇ ಪಟ್ಟಿಯಲ್ಲಿ ನಿಂಬಣ್ಣವರ ಹೆಸರೇ ಮಾಯವಾಗಿದೆ.
ನಾಲ್ಕು ದಿನಗಳ ಹಿಂದರಯಷ್ಟೇ ಪಕ್ಷ ಸೇರಿದ್ದ ಛಬ್ಬಿ ಅವರು ಕಲಘಟಗಿ ಕ್ಷೇತ್ರದ ಟಿಕೆಟ್ ಕೇಳಿದ್ದರು. ಇದನ್ನು ಬಿಜೆಪಿ ಹೈಕಮಾಂಡ್ ಪುರಸ್ಕರಿಸಿ ಛಬ್ಬಿಯವರಿಗೆ ಕಲಘಟಗಿ ಟಿಕೆಟ್ ಘೋಷಣೆ ಮಾಡಿದೆ.