ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಹೆಚ್ಚುವರಿ ಸೀಮೆಎಣ್ಣೆ ಮಂಜೂರು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಚ್ಚುವರಿ 2,500 ಕೆಎಲ್ (25 ಲಕ್ಷ ಲೀಟರ್) ಸೀಮೆ ಎಣ್ಣೆ ಬಿಡುಗಡೆ ಮತ್ತು 2022-23ನೇ ಸಾಲಿನ ಹಂಚಿಕೆಗಿಂತಲೂ ಹೆಚ್ಚುವರಿ ಸೌಲಭ್ಯ ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ ಎಂದು ತಿಳಿಸಿದ್ದಾರೆ.
ಕರಾವಳಿ ಪ್ರದೇಶದ ಮೀನುಗಾರರು ಈ ಬಗ್ಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಲ್ಲಿ ಮನವಿ ಮಾಡಿದ್ದರು. ಕರಾವಳಿ ಪ್ರದೇಶದ ಜೀವನಾಧಾರ ಮೀನುಗಾರಿಕೆ. ಮೀನುಗಾರಿಕೆಯನ್ನೇ ಬಹುಪಾಲು ಜನರು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರ ಮನವಿಯನ್ನು ಪರಿಗಣಿಸಬೇಕೆಂದು ಶೋಭಾ ಕರಂದ್ಲಾಜೆಯವರು ಮನವಿ ಮಾಡಿದ್ದರು.
ಅದರಂತೆ ಕೇಂದ್ರದ ಪೆಟ್ರೋಲಿಯಂ ಸಚಿವ ಹರದೀಪ ಸಿಂಗ್ ಪುರಿಯವರು ಮನವಿಗೆ ಸ್ಪಂದಿಸಿ, ಮೀನುಗಾರರ ಬೇಡಿಕೆಯನ್ನು ಈಡೇರಿಸಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ ಸಿಂಗ್ ಪುರಿಯವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.