ನಾಟಕೀಯ ಬೆಳವಣಿಗೆ: ಬಳ್ಳಾರಿ ಮೇಯರ್ ಚುನಾವಣೆ ಮುಂದಕ್ಕೆ!

Advertisement

ಬಳ್ಳಾರಿ: ನಾಟಿಕೀಯ ಬೆಳವಣಿಗೆಯಲ್ಲಿ ಇಂದು ನಡೆಯಬೇಕಿದ್ದ ಪಾಲಿಕೆಯ ಮೇಯರ್ ಆಯ್ಕೆ ಚುನಾವಣೆಯನ್ನು ಏಕಾಏಕಿ ಮುಂದೂಡಲಾಗಿದೆ. ಎಸ್‌ಸಿಗೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಇಂದು ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಿಸಲಾಗಿತ್ತು. ಮಧ್ಯಾಹ್ನ 12.30ರ ತನಕ ನಾಮಪತ್ರ ವಾಪಸ್ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಯಾರೂ ಸಹ ನಾಮಪತ್ರ ವಾಪಸ್ ಪಡೆಯಲಿಲ್ಲ.
ಕಾಂಗ್ರೆಸ್‌ನಿAದ 35ನೆಯ ವಾರ್ಡಿನ ಶ್ರೀನಿವಾಸ ಮಿಂಚು, 28ನೇ ವಾರ್ಡಿನ ಕುಬೇರ, 31ನೆಯ ವಾರ್ಡಿನ ಬಿ. ಶ್ವೇತ ನಾಮಪತ್ರ ಸಲ್ಲಿಸಿದರೆ ಬಿಜೆಪಿಯಿಂದ 1ನೇ ವಾರ್ಡಿನ ಗುಡಿಗಂಟಿ ಹನುಮಂತ ನಾಮಪತ್ರ ಸಲ್ಲಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್, ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ಮುಖಂಡರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ತೆರಳಿರುವ ಬೆನ್ನಲ್ಲೇ ಮೇಯರ್ ಆಯ್ಕೆಗೆ ಚುನಾವಣೆ ಘೋಷಿಸಲಾಗಿತ್ತು. ಆದರೆ, ಅಧಿಕಾರಿಗಳು ಚುನಾವಣೆಯ ವಿಸ್ತೃತ ವೇಳಾಪಟ್ಟಿ ನೀಡಿರಲಿಲ್ಲ.
ಆದರೂ ಬೆಳಗ್ಗೆ ಅಪರ ಜಿಲ್ಲಾಧಿಕಾರಿ ಮೊಹಮದ್ ಜುಬೇರ್ ಚುನಾವಣಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸಲು ಪಾಲಿಕೆ ಕಚೇರಿಗೆ ಆಗಮಿಸಿ, ನಾಮಪತ್ರ ಸ್ವೀಕಾರ ಮಾಡಿದ್ದರು. ಆದರೆ, ಏಕಾಏಕಿ ಚುನಾವಣೆ ನಡೆಸುವ ಸಂದರ್ಭ ಬರುತ್ತಲೇ ಪ್ರಾದೇಶಿಕ ಆಯುಕ್ತರ ಸೂಚನೆಯ ಮೇರೆಗೆ ಚುನಾವಣೆ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಪ್ರಕಟಿಸಿದ ಬಳಿಕ ಚುನಾವಣಾ ಪ್ರಕ್ರಿಯೆ ಇಂದು ಎಲ್ಲಿಗೆ ನಿಂತಿದೆಯೋ ಅಲ್ಲಿಂದಲೇ ಆರಂಭ ಆಗುತ್ತದೆ ಎಂದು ತಿಳಿಸಿದರು.
ಅಂದರೆ ಮುಂದಿನ ದಿನಾಂಕದಂದು ನಡೆಯುವ ಚುನಾವಣೆ ವೇಳೆ ಹೊಸ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಹಾಗಿಲ್ಲ. 39 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 26 ಸ್ಥಾನ ಹೊಂದಿದೆ. ಬಿಜೆಪಿ 13 ಸ್ಥಾನ ಪಡೆದುಕೊಂಡಿದೆ.
ಚುನಾವಣೆ ಮುಂದೂಡಿಕೆ ವಿಷಯವನ್ನು ಪ್ರಕಟಿಸುತ್ತಲೇ ಬಿಜೆಪಿಯ 13 ಜನ ಸದಸ್ಯರು, ಕಾಂಗ್ರೆಸ್‌ನ ಮಾಜಿ ಮೇಯರ್ ರಾಜೇಶ್ವರಿ, ಸದಸ್ಯರಾದ ಮಿಂಚು ಶ್ರೀನಿವಾಸ್, ಪ್ರಭಂಜನ್‌ಕುಮಾರ್, ಮುಲ್ಲಂಗಿ ನಂದೀಶ್ ಚುನಾವಣೆ ನಿಗದಿಯಾಗಿದ್ದ ಪಾಲಿಕೆ ಸಭಾಂಗಣದಲ್ಲಿಯೇ ಕುಳಿತು ಚುನಾವಣೆ ನಡೆಯುವಂತೆ ಪಟ್ಟುಹಿಡಿದರು.