ನಾಗಮಂಗಲದಲ್ಲಿ ಭಾರತ್ ಜೋಡೋ ಮಿಂಚು

ಭಾರತ್ ಜೋಡೋ ಮಿಂಚು
Advertisement

ನಾಗಮಂಗಲ (ಮಂಡ್ಯ ಜಿಲ್ಲೆ): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆ.30ರಿಂದ ನಡೆಯುತ್ತಿರುವ ಪಾದಯಾತ್ರೆ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಡಣ, ಪಾಂಡವಪುರ ಮೂಲಕ ನಿನ್ನೆ ನಾಗಮಂಗಲ ತಾಲೂಕಿಗೆ ಪಾದಾರ್ಪಣೆ ಮಾಡಿದೆ. ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಮತ್ತು ರಾಜ್ಯ ಮಟ್ಟದ ನಾಯಕರು ಪಾದಯಾತ್ರೆಗೆ ಸಾಥ್ ನೀಡಿದ್ದರು.
ಆದರೆ ಇಂದು ಬೆಳಿಗ್ಗೆ 7ರ ಸುಮಾರಿಗೆ ನಾಗಮಂಗಲ ಪುರಸಭಾ ವ್ಯಾಪ್ತಿಯ ಕೆ.ಮಲ್ಲೇನಹಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಯಾವೊಬ್ಬ ಕೇಂದ್ರ ಅಥವಾ ರಾಜ್ಯ ಮಟ್ಟದ ನಾಯಕರು ಇರಲಿಲ್ಲ. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತ್ರ ರಾಹುಲ್ ಜೊತೆ ಹೆಜ್ಜೆ ಹಾಕಿದರು. ಪಟ್ಟಣ ವ್ಯಾಪ್ತಿ ದಾಟುವಷ್ಟರಲ್ಲಿ ಮಾಜಿ ಸಚಿವೆ ಉಮಾಶ್ರೀ ಹಾಗೂ ಧೃವನಾರಾಯಣ್ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಕಾಚೇನಹಳ್ಳಿ ಸಮೀಪದ ಬಾಳೆತೋಟಕ್ಕೆ ಭೇಟಿ ನೀಡಿದ ರಾಹುಲ್, ರೈತರು ನೀಡಿದ ಎಳ ನೀರು ಕುಡಿದರು. ಆ ಸಂದರ್ಭ ಮಗ ಸಚ್ಚಿನ್ ಜೊತೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ರಾಹುಲ್ ಅವರೊಂದಿಗೆ ಚರ್ಚೆ ನಡೆಸಿದರು.
ಗೌಡರ ಗೌಡ ರಾಹುಲ್ ಗೌಡ!…
ಪಾದಯಾತ್ರೆ ಅಂಚೆಚಿಟ್ಟನಹಳ್ಳಿ ತಲುಪುತಿದ್ದಂತೆ ಜಮಾಯಿಸಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಗೌಡರ ಗೌಡ ಸ್ವಾಮಿಗೌಡ ಎಂಬ ಚಲುವರಾಯಸ್ವಾಮಿ ಪರ ಘೋಷಣೆ ಕೂಗುವ ಭರದಲ್ಲಿ ಗೌಡರ ಗೌಡ ರಾಹುಲ್ ಗೌಡ ಎನ್ನುತ್ತಿದ್ದರು. ರಸ್ತೆಯುದ್ದಕ್ಕೂ ರಾಹುಲ್ ನೋಡುವ ತವಕದಲ್ಲಿ ರಸ್ತೆ ಬದಿಯ ಕಟ್ಟಡಗಳ ಮೇಲೆ ಹಾಗೂ ರಸ್ತೆಯ ಎರಡು ಬದಿಯಲ್ಲಿ ನಿಂತಿದ್ದರು. ಜನರತ್ತ ಕೈ ಬೀಸುವ ಮೂಲಕ ರಾಹುಲ್ ಜನತೆಗೆ ಧನ್ಯವಾದ ತಿಳಿಸುತ್ತಿದ್ದರು. ಕೆ.ಮಲ್ಲೇನಹಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆ 11 ಕಿ.ಮೀ. ದೂರದ ಅಂಚೆಭುವನಹಳ್ಳಿ ತಲುಪಿತು. ವಿಶ್ರಾಂತಿಯ ಬಳಿಕ ನಡೆಸುವ ಸಂವಾದದ ನಂತರ ಸಾಯಂಕಾಲ 4ಕ್ಕೆ ಹೊರಟು ಸಂಜೆ 7ಕ್ಕೆ ಬೆಳ್ಳೂರಿನಲ್ಲಿ ನಡೆಯುವ ಬಹಿರಂಗ ಸಭೆ ಭಾಗವಹಿಸುವರು. ನಂತರ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ವಾಸ್ತವ್ಯ ಹೂಡುವರು.