ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನವೆಂಬರ್ 11 ರಂದು ರಾಜ್ಯ ಕ್ಕೆ ಆಗಮಿಸಿದ್ದು ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಂದೇ ಭಾರತ್ – ಚೆನ್ನೈ – ಮೈಸೂರು- ಬೆಂಗಳೂರು ರೈಲನ್ನು ಉದ್ಘಾಟಿಸಲಿದ್ದಾರೆ. ಇದು ಬಹಳ ದಿನಗಳ ನಮ್ಮ ಬೇಡಿಕೆಯಾದ ಹೈಸ್ಪೀಡ್ ರೈಲನ್ನು ಪ್ರಧಾನಿಗಳು ಈಡೇರಿಸುತ್ತಿದ್ದಾರೆ. ಜೊತೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದಲ್ಲಿ ಟರ್ಮಿನಲ್ ಉದ್ಘಾಟಿಸಲಿದ್ದಾರೆ. ಇದರ ಅವಶ್ಯಕತೆ ಕೂಡ ಇತ್ತು. ಬೆಂಗಳೂರಿಗೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದ್ದು, 25 ಲಕ್ಷ ಜನರನ್ನು ನಿಭಾಯಿಸುವ ಸಾಮರ್ಥ್ಯ ವುಳ್ಳ, ನೂರು ಕೌಂಟರ್ ಗಳುಳ್ಳ ಅಂತರರಾಷ್ಟ್ರೀಯ ಟರ್ಮಿನಲ್ ಉದ್ಘಾಟನೆಯಾಗುತ್ತಿದೆ. ಎರಡೂ ಟರ್ಮಿನಲ್ ಕೂಡಿದರೆ, ದೆಹಲಿಯ ನಂತರ ದೇಶದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ. ಕರ್ನಾಟಕ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾಗಲಿದೆ. ಪ್ರವಾಸೋದ್ಯಮ, ಕೈಗಾರಿಕೆ, ಐ.ಟಿ, ಬಿಟಿ, ಆರ್.ಅಂಡ್ ಡಿ ವಲಯಗಳಿಗೂ ದೊಡ್ಡ ಅನುಕೂಲ ವಾಗಲಿದೆ ಎಂದರು.
ನಂತರ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣವಾಗುತ್ತಿದೆ. ಕೆಂಪೇಗೌಡರು ವಿಕಾಸಪುರುಷರು. ಹೀಗಾಗಿ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಇಡೀ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿಗಳಿಂದ ಉದ್ಘಾಟನೆಯಾಗುತ್ತಿರುವುದು ಅತ್ಯಂತ ಯೋಗ್ಯವಾಗಿದೆ. ನಂತರ ಸಾರ್ವಜನಿಕ ಕಾರ್ಯಕ್ರಮವಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.