ಉಜಿರೆ: ಸವದಿಗೆ ನನ್ನ ಮತ್ತು ಪಕ್ಷದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಸ್ವಲ್ಪ ಕೋಪದಲ್ಲಿ ಕೆಲ ವಿಷಯ ಹೇಳಿದ್ದಾರೆ. ಅದನ್ನು ಸ್ವತಃ ಮಾತನಾಡಿ ಬಗೆಹರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಪಕ್ಷದ ಸೀಟು ಹಂಚಿಕೆ ವಿಚಾರವಾಗಿ ಅನೇಕರಿಗೆ ಅಸಮಾಧಾನವಾಗಿರಬಹುದು. ಅಸಮಾಧಾನಗೊಂಡ ಎಲ್ಲರ ಬಳಿ ಮಾತನಾಡುತ್ತಿದ್ದೇನೆ. ಪಕ್ಷ ಅವರನ್ನು ಗೌರವದಿಂದ ಕಂಡು ಶಾಸಕರಾಗಿ ಮಾಡಿದೆ. ಅವರ ರಾಜಕೀಯ ಭವಿಷ್ಯವನ್ನು ಗೌರವಪೂರ್ವಕವಾಗಿ ಇರುವ ಹಾಗೆ ನೋಡಿಕೊಳ್ಳುತ್ತೇನೆ ಎಂದರು.
ಬಿಜೆಪಿಯವರು ವಿನಯ್ ಕುಲಕರ್ಣಿ ಅವರನ್ನು ಟಾರ್ಗೆಟ್ ಮಾಡಿಲ್ಲ. ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ, ನನ್ನ ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಎದುರಾಳಿ ಯಾರೇ ಇದ್ದರೂ ಚುನಾವಣೆ ಎದುರಿಸೋದು ಗೊತ್ತಿದೆ. ಈಶ್ವರಪ್ಪ ರಾಜಕೀಯ ನಿವೃತ್ತಿ ಆಗಿಲ್ಲ, ಚುನಾವಣೆ ರಾಜಕೀಯದಲ್ಲಿ ಸಕ್ರಿಯರಾಗಿ ಇರುತ್ತಾರೆ. ಅವರ ಜೊತೆಗೆ ವರಿಷ್ಠರು ಈಗಾಗಲೇ ಮಾತನಾಡಿದ್ದಾರೆ ಎಂದರು.
ಶೀಘ್ರ ಎರಡನೇ ಪಟ್ಟಿ..
ಸುಳ್ಯದ ಶಾಸಕ, ಸಚಿವ ಅಂಗಾರ ಬಹಳ ಜೆಂಟಲ್ ಮೆನ್ ರಾಜಕಾರಣಿ ನಾನು ಅವರ ಜೊತೆ ಮಾತನಾಡ್ತೇನೆ. ಅವರೂ ಪಕ್ಷದಲ್ಲಿ ಸಕ್ರಿಯರಾಗಿರುತ್ತಾರೆ. ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಅತೀ ಶೀಘ್ರದಲ್ಲೇ ನಾಳೆ ಅಥವಾ ನಾಡಿದ್ದು ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೋಮೇಶ್ವರ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಆಗಾಗ ಭೇಟಿ ನೀಡಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯುತ್ತೇನೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದೇನೆ. ಸಮಸ್ತ ಕನ್ನಡ ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಮಾಡಿದ್ದೇನೆ, ಸತ್ಯಕ್ಕೆ ಜಯವಾಗಲಿ ಎಂದರು.