ನನ್ನನ್ನು ಇದೇ ಮಣ್ಣಲ್ಲಿ ಹೂಳಬೇಕು: ಭಾವುಕರಾದ ಸಿಎಂ ಬೊಮ್ಮಾಯಿ

BASAVARAJ BOMAI
Advertisement

ಹಾವೇರಿ: ʻನಾನು ನಿಮ್ಮ ಋಣದಲ್ಲಿದ್ದೇನೆ, ನೀವು ನನ್ನ ಹೃದಯ ಸ್ಥಾನದಲ್ಲಿದ್ದೀರಿ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ನಿಮ್ಮ ಸೇವೆ ಮಾಡುತ್ತೇನೆ. ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು ಎಂದು ಮೊದಲ ಚುನಾವಣೆಯಲ್ಲೇ ಹೇಳಿದ್ದೆʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾದರು.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಜನ್ಮದ ಸಂಬಂಧವೋ ಗೊತ್ತಿಲ್ಲ. ಜನಪ್ರತಿನಿಧಿಗೆ ಮೀರಿದ ಕುಟುಂಬದ ಸದಸ್ಯನಂತೆ ಪ್ರೀತಿ ಕೊಟ್ಟಿದ್ದೀರಿ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ನಾಡಿನ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ರಾಜ್ಯದ ನಾನಾ ಕಡೆ ಹೋದಾಗ ಸಿಗುವ ಸ್ವಾಗತ ನೋಡಿದಾಗ ನೀವು ನೆನಪಾಗುತ್ತೀರಿ. ಈ ಸ್ಥಾನ ಗೌರವ ನನಗೆ ಸಿಗಬೇಕಾದ್ದಲ್ಲ. ಕ್ಷೇತ್ರದ ಜನರಿಗೆ ಸಿಗಬೇಕಾದದ್ದು ಎಂದು ಅನಿಸುತ್ತಿದೆ ಎಂದರು.
ಎಲ್ಲ ಗ್ರಾಮಗಳಿಗೆ ಅನೇಕ ಸಲ ಹೋಗಿದ್ದೇನೆ. ನನಗೆ ರೊಟ್ಟಿ, ಬುತ್ತಿ, ಹೋಳಿಗೆ, ಸೀಕರಣೆ ಉಣಿಸಿದ್ದೀರಿ. ಇಷ್ಟೊಂದು ಪ್ರೀತಿ, ವಿಶ್ವಾಸ ತೋರಿಸಿದ್ದೀರಿ. ಅದರ ಮುಂದೆ ಎಷ್ಟು ಕೆಲಸ ಮಾಡಿದರೂ ಕಡಿಮೆ ಎಂದರು.
ಈಗ ನಿಮ್ಮೊಂದಿಗೆ ಬಹಳ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸಾಹೇಬ್ರು ದೂರ ಹೋದ್ರು ಎಂಬ ಆಂತಕ, ನೋವು ನಿಮ್ಮಲ್ಲಿದೆ. ನಾನು ಎಲ್ಲೆ ಇದ್ದರೂ ನೀವು ನನ್ನ ಹೃದಯ ಸ್ಥಾನದಲ್ಲಿದ್ದೀರಿ. ಬಡ ಜನರ, ರೈತರ ಕಲ್ಯಾಣಕ್ಕಾಗಿ ಯೋಜನೆ ಮುಟ್ಟಿಸಿದಾಗ ಸುಭಿಕ್ಷ ಕ್ಷೇತ್ರ ಆಗಲಿದೆ. ಅದನ್ನು ಮಾಡಿಯೇ ತೀರುವುದಾಗಿ ಪಣ ತೊಡುತ್ತೇನೆ ಎಂದರು.